
ಹೊಸದಿಲ್ಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ತೀಕ್ಷ್ಣ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಭದ್ರತಾ ಸನ್ನಾಹವನ್ನು ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಭಾರತದ ಉತ್ತರ ಭಾಗದ ಹಲವಾರು ವಿಮಾನ ನಿಲ್ದಾಣಗಳಲ್ಲಿನ ನಾಗರಿಕ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ಮೇ 7ರ ಬುಧವಾರ ಇಂಡಿಗೋ ಏರ್‌ಲೈನ್ಸ್ ಅಧಿಕೃತ ಪ್ರಕಟಣೆಯೊಂದರಲ್ಲಿ ಶ್ರೀನಗರ, ಜಮ್ಮು, ಲೇಹ್, ಧರ್ಮಶಾಲಾ, ಚಂಡೀಗಢ, ಅಮೃತಸರ ಮತ್ತು ಬಿಕಾನೇರ್ ಗೆ ಹೋಗುವ ಮತ್ತು ಬರುವ ವಿಮಾನಗಳು ತಡವಾಗಬಹುದು ಅಥವಾ ರದ್ದಾಗಬಹುದು ಎಂದು ತಿಳಿಸಿದೆ. ಕೇಂದ್ರ ಸರ್ಕಾರದಿಂದ ಸಿಕ್ಕಿರುವ ತಾತ್ಕಾಲಿಕ ಸೂಚನೆಯ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದೇ ವೇಳೆ, ಸ್ಪೈಸ್‌ಜೆಟ್ ಕೂಡಾ ಉತ್ತರ ಭಾರತದ ಕೆಲವು ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಎಲ್ಲಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಪೂರ್ವಸೂಚನೆಗಳೊಂದಿಗೆ ಮಾಹಿತಿ ನೀಡಲು ಮುಂದಾಗಿವೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿರುವಂತೆಯೇ, ಗಡಿಭಾಗದ ಪರಿಸ್ಥಿತಿ ತೀವ್ರ ತಣಿವು ಎದುರಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮುಂದಿನ ಸೂಚನೆಗಳ ಹೊರತಾಗಿಯೇ ವಿಮಾನ ಸೇವೆ ಮರುಸಕ್ರಿಯಗೊಳ್ಳಲಿವೆ ಎಂದು ಸೂಚನೆ ನೀಡಲಾಗಿದೆ.