
ಇಸ್ಲಾಮಾಬಾದ್: ಭಾರತದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮಹತ್ವದ ಯಶಸ್ಸು ಗಳಿಸಿದ್ದು, 1999ರ ಕಂದಹಾರ್ ವಿಮಾನ ಹೈಜಾಕ್‌ನ ಪ್ರಮುಖ ಸಂಚಾಲಕರಾಗಿದ್ದ ಅಬ್ದುಲ್ ರೌಫ್ ಅಜರ್ ಸಾವನ್ನಪ್ಪಿದ್ದಾನೆ ಎಂಬುದನ್ನು ಭಾರತೀಯ ಗುಪ್ತಚರ ಇಲಾಖೆ ಅಧಿಕೃತವಾಗಿ ದೃಢಪಡಿಸಿದೆ.
ಪಾಕಿಸ್ತಾನದ ಬಹವಾಲ್ಪುರ ಪ್ರದೇಶದಲ್ಲಿ ಭಾರತೀಯ ವಾಯುಪಡೆಯು ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಜೈಶ್-ಎ-ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ ಸದಸ್ಯರನ್ನು ಗುರಿಯಾಗಿಸಲಾಗಿತ್ತು. ಈ ದಾಳಿಯಲ್ಲಿ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಒಳಪಟ್ಟಿದ್ದ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾನೆ ಎಂಬ ಮಾಹಿತಿ ಗುಪ್ತಚರ ಮೂಲಗಳಿಂದ ಲಭ್ಯವಾಗಿದೆ.
ಹಲವಾರು ಭಯೋತ್ಪಾದಕ ದಾಳಿಗಳ ರೂವಾರಿ
ಅಬ್ದುಲ್ ರೌಫ್ ಅಜರ್ ಕೇವಲ ಕಂದಹಾರ್ ಹೈಜಾಕ್ ಮಾತ್ರವಲ್ಲದೆ, ಉರಿ, ಪುಲ್ವಾಮಾ, ಪಠಾಣ್‌ಕೋಟ್, 2001ರ ಸಂಸತ್ ದಾಳಿ ಮತ್ತು ಅಕ್ಷರಧಾಮ ದಾಳಿಯ ಪ್ರಮುಖ ಸಂಚಾಲಕನಾಗಿಯೂ ಕಾರ್ಯನಿರ್ವಹಿಸಿದ್ದ. ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಈತನ ವಿರುದ್ಧ ಭಾರತದಲ್ಲಿ ಹಲವು ಕೇಸುಗಳು ದಾಖಲಾಗಿದ್ದು, ಅತಿದೊಡ್ಡ ಭಯೋತ್ಪಾದಕನಾಗಿದ್ದ.
ಅವನ ಸಾವಿನಿಂದ ಭಯೋತ್ಪಾದಕ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಲಿದೆ ಎಂಬ ನಂಬಿಕೆ ಭಾರತೀಯ ಭದ್ರತಾ ವಲಯದಲ್ಲಿದೆ. ಗುಪ್ತಚರ ಮೂಲಗಳ ಪ್ರಕಾರ, ಈ ಕಾರ್ಯಾಚರಣೆಯು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ವಿರುದ್ಧ ನಿರಂತರ ನಡೆಯುತ್ತಿರುವ ತೀವ್ರ ಕ್ರಮದ ಭಾಗವಾಗಿದೆ.