
ಬೆಂಗಳೂರು: ಇತ್ತೀಚಿಗೆ ಮುಕ್ತಾಯಗೊಂಡ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ ಕುರಿತು ಸ್ಪೀಕರ್ ಯು.ಟಿ. ಖಾದರ್ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, “ಶಾಸಕರು ಶಿಸ್ತು ಮೀರಿದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಅಶಿಸ್ತಿನ ವರ್ತನೆ ಮುಂದುವರಿದರೆ, ಒಂದು ವರ್ಷದ ಅಮಾನತು ಸಹ ವಿಧಿಸುವ ಸಾಧ್ಯತೆ ಇದೆ” ಎಂದು ಗಂಭೀರವಾಗಿ ಎಚ್ಚರಿಸಿದ್ದಾರೆ.
ಅಮಾನತು ರಾಜಕೀಯ ಕುಯುಕ್ತಿಯಲ್ಲ:
ಈ ನಿರ್ಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಇತರರ ಯಾವುದೇ ಪಾತ್ರವಿಲ್ಲ, ಸದನದ ಘನತೆ ಮತ್ತು ಸಂವಿಧಾನದ ಗೌರವ ಕಾಪಾಡಲು ಈ ಕ್ರಮ ಅಗತ್ಯವಿತ್ತು ಎಂದು ಖಾದರ್ ಹೇಳಿದ್ದಾರೆ. “ಹಿಂದಿನ ಸ್ಪೀಕರ್‌ಗಳಿಗೆ ಈ ರೀತಿ ಶಿಸ್ತಿನ ಕ್ರಮ ಕೈಗೊಳ್ಳಲು ಧೈರ್ಯ ಇರಲಿಲ್ಲ. ಶಾಸಕರು ತಮ್ಮ ತಪ್ಪನ್ನು ಅರಿತುಕೊಂಡು ಅದನ್ನು ಪಾಠವಾಗಿ ಗ್ರಹಿಸಬೇಕು” ಎಂದಿದ್ದಾರೆ.
ಹನಿ ಟ್ರ್ಯಾಪ್ ತನಿಖೆಗೆ ಸ್ಪಂದನೆ:
ಹನಿ ಟ್ರ್ಯಾಪ್ ಆರೋಪಗಳ ಕುರಿತು ಸ್ಪಂದಿಸಿರುವ ಅವರು, ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲಿದ್ದು, ಅಗತ್ಯವಿದ್ದರೆ ಸಿಬಿಐ ತನಿಖೆಗಾಗಿ ಪರಿಗಣನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ:
ವಿಧಾನಸೌಧದ ಶಾಶ್ವತ ದೀಪಾಲಂಕಾರದ ಯೋಜನೆ ಪೂರ್ಣಗೊಂಡಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ನೆರವೇರಲಿದೆ. ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 6ರಿಂದ ರಾತ್ರಿ 9ರವರೆಗೆ ವಿಧಾನಸೌಧವನ್ನು ದೀಪಾಲಂಕೃತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.