
ಮಸ್ಕತ್/ಉಡುಪಿ: ಓಮನ್ ದೇಶದ ಉತ್ತರ ಅಲ್ ಬಟಿನಾ ಪ್ರಾಂತ್ಯದ ಲಿವಾ ವಿಲಾಯತ್ ಎಂಬಲ್ಲಿ ಸಂಭವಿಸಿದ ಭೀಕರ ಸರಣಿ ವಾಹನ ಅಪಘಾತದಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ಮೂಲದ ಯುವಕನೊಬ್ಬ ದುರ್ಮರಣಕ್ಕೀಡಾಗಿದ್ದಾರೆ.
ಉಚ್ಚಿಲದ ಕಳತೂರು ನಿವಾಸಿ, 26 ವರ್ಷ ಪ್ರಾಯದ ಚೇತನ್ ಮೃತಪಟ್ಟ ದುರ್ದೈವಿ. ಈ ಅಪಘಾತದಲ್ಲಿ ಚೇತನ್ ಸೇರಿ ಒಟ್ಟು ಮೂವರು ಪ್ರಾಣ ಕಳೆದುಕೊಂಡಿದ್ದು, ಮತ್ತೂ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರ (CDAA) ಅಧಿಕೃತವಾಗಿ ತಿಳಿಸಿದೆ.
ಘಟನೆಯ ವಿವರ:
ಮೂರು ವಾಹನಗಳ ನಡುವೆ ಸಂಭವಿಸಿದ ಈ ಭೀಕರ ಸಂಘರ್ಷದ ತೀವ್ರತೆಗೆ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ವ್ಯಕ್ತಿಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು, ವಾಹನಗಳ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಸ್ಥಳದಲ್ಲೇ ತುರ್ತು ವೈದ್ಯಕೀಯ ಸೇವೆ ಒದಗಿಸಿದ ಬಳಿಕ, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಚೇತನ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಅವರ ಸಂಬಂಧಿಕರು ಮತ್ತು ಅನಿವಾಸಿ ಕನ್ನಡಿಗರು ಓಮನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ.



































