
ಹುಬ್ಬಳ್ಳಿ : ಮಳೆಗಾಲದ ಮಧ್ಯೆ ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗುವ ಘಟನೆಯೊಂದು ನಿನ್ನೆ ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ನಡೆದಿದೆ. ಕೇಶವಕುಂಜದ ಬಳಿ ಓಲಾ ಕಂಪನಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಏಕಾಏಕಿ ಹೊತ್ತಿ ಉರಿದಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
yaಬೈಕ್ ನಿಂತಲ್ಲೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮಳೆಯ ನಡುವೆ ಬೈಕ್ ಇಡೀ ಹೊತ್ತಿ ಉರಿಯುವ ದೃಶ್ಯ ಸ್ಥಳೀಯರಲ್ಲಿ ಆಘಾತವನ್ನುಂಟು ಮಾಡಿದೆ. ಬೆಂಕಿ ನೋಡಿದ ಜನರು ತಕ್ಷಣ ದೂರ ಸರಿದರೂ, ಕೆಲವರು ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೂ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕೇವಲ ಲೋಹದ ಅವಶೇಷ ಮಾತ್ರ ಉಳಿದಿದೆ.
ಸುರಕ್ಷತೆ ಬಗ್ಗೆ ಪ್ರಶ್ನೆಗಳು, ತಜ್ಞರ ಎಚ್ಚರಿಕೆ
ಈ ಘಟನೆ ಮಳೆಗಾಲದ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆ, ನಿರ್ವಹಣೆ ಹಾಗೂ ಶಾರ್ಟ್ ಸರ್ಕ್ಯೂಟ್ ತಡೆಗಟ್ಟುವ ಕ್ರಮಗಳ ಕುರಿತು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ಇಂತಹ ಘಟನೆಗಳು ನಮ್ಮ ನಿತ್ಯದ ಪ್ರಯಾಣದಲ್ಲಿ ಎಷ್ಟು ಸುರಕ್ಷತೆ ಇದೆ?” ಎಂಬ ಚಿಂತನೆ ಜನರಲ್ಲಿ ಮೂಡಿದೆ. “ಮಳೆಯ ವೇಳೆಯಲ್ಲಿ ಎಲೆಕ್ಟ್ರಿಕ್ ಬೈಕ್‌ಗಳು ಸುರಕ್ಷಿತವೇ?” ಎಂಬ ಸಂಶಯದಲ್ಲಿ ಜನ ಸಾಮಾನ್ಯರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಓಲಾ ಕಂಪನಿಯ ಪ್ರತಿನಿಧಿಗಳಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.
ಇದೇ ಮೊದಲಲ್ಲದ ರೀತಿಯ ಘಟನೆ ಇದಾಗಿದೆ ಎಂಬುದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರು ತಂತ್ರಜ್ಞಾನದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕಾಗಿದ್ದು, ಗ್ರಾಹಕರಲ್ಲಿ ವಿಶ್ವಾಸ ತುಂಬುವಂತಹ ನಿರ್ವಹಣಾ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ.