
ಒಡಿಶಾ: ಭ್ರಷ್ಟಾಚಾರದ ಕೂಪಕ್ಕೆ ಇಳಿದಿದ್ದ ಗಣಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಅಸಲಿ ಮುಖವಾಡ ಈಗ ಕಳಚಿದೆ. ಕೇವಲ 30 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ (ವಿಜಿಲೆನ್ಸ್) ಬಲೆಗೆ ಬಿದ್ದ ಅಧಿಕಾರಿಯ ಮನೆಯಲ್ಲಿ ಸಿಕ್ಕ ಸಂಪತ್ತನ್ನು ಕಂಡು ತನಿಖಾಧಿಕಾರಿಗಳೇ ದಂಗಾಗಿದ್ದಾರೆ.
ಘಟನೆಯ ವಿವರ: ಒಡಿಶಾದ ಗಣಿ ಇಲಾಖೆಯ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಎಂಬುವವರ ನಿವಾಸದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ಟ್ರೋಲಿ ಬ್ಯಾಗ್‌ಗಳನ್ನು ತೆರೆದಾಗ, ಅದರಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಬುಧವಾರದವರೆಗೂ ನಡೆದ ಸುದೀರ್ಘ ನೋಟು ಎಣಿಕೆ ಕಾರ್ಯದ ಬಳಿಕ, ಬರೋಬ್ಬರಿ 4.27 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
30 ಸಾವಿರಕ್ಕೆ ಬಿದ್ದ ಬಲೆ, ಸಿಕ್ಕಿದ್ದು ಕೋಟಿಗಳು! ಪರವಾನಗಿ ಪಡೆದ ಕಲ್ಲಿದ್ದಲು ವ್ಯಾಪಾರಿಯೊಬ್ಬರಿಗೆ ವ್ಯವಹಾರದಲ್ಲಿ ತೊಂದರೆ ನೀಡದೆ ಸಹಕರಿಸಲು ಮೊಹಂತಿ 30,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ್ದ ವಿಜಿಲೆನ್ಸ್ ತಂಡ, ಅಧಿಕಾರಿಯನ್ನು ರೆಡ್-ಹ್ಯಾಂಡ್ ಆಗಿ ಹಿಡಿಯಲು ಸಂಚು ರೂಪಿಸಿತ್ತು. ಹಣ ಪಡೆಯುತ್ತಿದ್ದಂತೆಯೇ ದಾಳಿ ನಡೆಸಿದ ತಂಡಕ್ಕೆ, ಮುಂದಿನ ತನಿಖೆಯಲ್ಲಿ ಸಿಕ್ಕಿದ್ದು ಅಕ್ರಮ ಆಸ್ತಿಯ ಭಂಡಾರ.

ಜಪ್ತಿಯಾದ ಸೊತ್ತುಗಳು:
- ನಗದು: 4.27 ಕೋಟಿ ರೂಪಾಯಿ (ಟ್ರೋಲಿ ಬ್ಯಾಗ್‌ನಲ್ಲಿ).
- ಕಚೇರಿ ಹಣ: 1.20 ಲಕ್ಷ ರೂಪಾಯಿ ನಗದು.
- ಚಿನ್ನಾಭರಣ: 130 ಗ್ರಾಂ ಚಿನ್ನದ ಆಭರಣಗಳು.
- ಆಸ್ತಿ ಪಾಸ್ತಿ: ಭುವನೇಶ್ವರದಲ್ಲಿ ಐಷಾರಾಮಿ ದ್ವಿತಲ ಭವನ, 2,400 ಚದರ ಅಡಿಯ ನಿರ್ಮಾಣ ಹಂತದ ಕಟ್ಟಡ ಹಾಗೂ 10 ವಿವಿಧ ಬ್ಯಾಂಕ್ ಖಾತೆಗಳು.
ಹಳೇ ಖದೀಮ: ಕುತೂಹಲಕಾರಿ ಸಂಗತಿಯೆಂದರೆ, 2004 ರಲ್ಲಿ ಕೇವಲ 8,000 ರೂಪಾಯಿ ವೇತನಕ್ಕೆ ಜೂನಿಯರ್ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ್ದ ಮೊಹಂತಿ ಮೇಲೆ 2009 ರಲ್ಲೇ ಭ್ರಷ್ಟಾಚಾರದ ಕೇಸ್ ದಾಖಲಾಗಿತ್ತು. ಅದರ ವಿಚಾರಣೆ ನಡೆಯುತ್ತಿರುವಾಗಲೇ ಇಷ್ಟೊಂದು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಗಳಿಸಿರುವುದು ರಾಜ್ಯದ ಭ್ರಷ್ಟಾಚಾರ ನಿರೋಧಕ ದಳದ ಇತಿಹಾಸದಲ್ಲೇ ಅತಿದೊಡ್ಡ ಜಪ್ತಿ ಪ್ರಕರಣ ಎಂದು ದಾಖಲಾಗಿದೆ.
ರಾಜಕೀಯ ಕೆಸರೆರಚಾಟ: ಈ ಪ್ರಕರಣವು ಒಡಿಶಾ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವೀರೋಚಿತ ದಾಳಿ ನಡೆಸಿದ್ದು, “ಡಬಲ್ ಇಂಜಿನ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ” ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಭಕ್ತ ಚರಣ್ ದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.



































