
ಒಡಿಶಾ: ಒಡಿಶಾದ ಕಂದಮಾಲ್ ಜಿಲ್ಲೆಯ ಫಿರಿಂಗಿಯಾ ಬ್ಲಾಕ್‌ನ ಸಲಗುಡದಲ್ಲಿರುವ ಸೇವಾಶ್ರಮ್ ಶಾಲೆಯ ಹಾಸ್ಟೆಲ್‌ನಲ್ಲಿ ರಾತ್ರೋರಾತ್ರಿ ನಡೆದ ಭೀಕರ ಘಟನೆಯಲ್ಲಿ, ದುಷ್ಕರ್ಮಿಗಳು ನಿದ್ರಿಸುತ್ತಿದ್ದ 8 ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಅಂಟನ್ನು ಸುರಿದಿದ್ದಾರೆ. ಈ ಅಮಾನವೀಯ ಕೃತ್ಯದಿಂದಾಗಿ ವಿದ್ಯಾರ್ಥಿಗಳು ಬೆಳಗ್ಗೆ ಎದ್ದಾಗ ಕಣ್ಣುಗಳನ್ನು ತೆರೆಯಲು ಸಾಧ್ಯವಾಗದೆ ತೀವ್ರ ಸಂಕಟ ಅನುಭವಿಸಿದ್ದಾರೆ.
ತಕ್ಷಣವೇ ಅವರನ್ನು ಗೋಚಪದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಫುಲ್ಬಾನಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರಿಂದ ಕಣ್ಣುಗಳಿಗೆ ಆಗಬಹುದಾದ ಗಂಭೀರ ಹಾನಿಯನ್ನು ತಪ್ಪಿಸಲಾಗಿದೆ. ಈ 8 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯನ್ನು ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿದ್ದು, ಉಳಿದ 7 ವಿದ್ಯಾರ್ಥಿಗಳನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ.
ಈ ಘಟನೆಯ ನಂತರ ಶಾಲಾ ಆವರಣದಲ್ಲಿ ಭದ್ರತಾ ಲೋಪಗಳ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಕ್ಯಾಂಪಸ್‌ನೊಳಗೆ ಅಂಟು ಹೇಗೆ ಲಭ್ಯವಾಯಿತು? ಈ ಕೃತ್ಯದ ಹಿಂದೆ ಯಾರು ಇದ್ದಾರೆ? ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಮನೋರಂಜನ್ ಸಾಹು ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದ್ದು, ಘಟನೆಯ ಕುರಿತು ಸಂಪೂರ್ಣ ತನಿಖೆಗೆ ಆದೇಶ ನೀಡಲಾಗಿದೆ. ಇಂತಹ ಅಮಾನುಷ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಹಾಗೂ ಜಿಲ್ಲಾಡಳಿತ ಮುಂದಾಗಿದೆ. ಸದ್ಯ ವಿದ್ಯಾರ್ಥಿಗಳ ಆರೋಗ್ಯ ಸುಧಾರಿಸುತ್ತಿದ್ದು, ಅವರು ಸಂಪೂರ್ಣ ಗುಣಮುಖರಾಗುವವರೆಗೂ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.



































