
ಹೆಬ್ರಿ: ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಹಾಗೂ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮಹತ್ವದ ಉದ್ದೇಶದೊಂದಿಗೆ, ಶ್ರೀ ಸಾಯಿಶಿವ ಕಲಾಲಯ ಎಜುಕೇಶನ್ ಅಗ್ನೈಸೇಷನ್ (ರಿ.) ಮತ್ತು ಮಯೂರಿ ನಾಟ್ಯಕಲಾ ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ 14, ಭಾನುವಾರದಂದು “ನೃತ್ಯ-ಸಮರ್ಪಣಂ” ಎಂಬ ಅದ್ಧೂರಿ ನೃತ್ಯೋತ್ಸವವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಹೆಬ್ರಿ ಬಂಟರ ಭವನದಲ್ಲಿ ಸಂಜೆ 6.00 ಗಂಟೆಗೆ ವೈಭವೋಪೇತವಾಗಿ ನೆರವೇರಲಿದೆ.
ಕಲೆ ಮತ್ತು ಸಂಸ್ಕೃತಿಯ ಅನಾವರಣಕ್ಕೆ ವೇದಿಕೆಯಾಗಲಿರುವ ಈ ಉತ್ಸವದಲ್ಲಿ, ನಾಟ್ಯಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳು ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಉದಯ ಶೆಟ್ಟಿ ಮುನಿಯಾಲು, ಅಧ್ಯಕ್ಷರು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.), ಮುನಿಯಾಲು ಇವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಸೀತಾನದಿ ವಿಠಲ ಶೆಟ್ಟಿ ಇವರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ, ಮಾಜಿ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್ ಉಡುಪಿ, ಶ್ರೀ ಹರ್ಷ ಶೆಟ್ಟಿ ಹಾಗೂ ಹೆಬ್ರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಶ್ರೀ ಸದಾಶಿವ ಸೇರ್ವೆಗಾರ್, ಹಾಗೆಯೇ ಬಂಟರ ಭವನದ ಪ್ರಾಯೋಜಕರಾದ ಶ್ರೀ ಸುಕೇಶ್ ಶೆಟ್ಟಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ನಾಗರಿಕರಾದ ಶ್ರೀ ಸಾಧು ಮಡಿವಾಳ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮವೂ ಈ ದಿನ ಜರುಗಲಿದೆ. ಮಯೂರಿ ನಾಟ್ಯಕಲಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಶ್ರೀ ಸಾಯಿಶಿವ ಕಲಾಲಯದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಮಸ್ತ ಸದಸ್ಯರು ಈ ವಿಶಿಷ್ಟ ಕಲಾ ಸಂಭ್ರಮಕ್ಕೆ ಎಲ್ಲ ಕಲಾಸಕ್ತರಿಗೂ ಪ್ರೀತಿಯ ಸ್ವಾಗತ ಬಯಸಿದ್ದಾರೆ. ನಾಡಿನ ಹೆಸರಾಂತ ಕಲಾವಿದರಿಂದ ನೃತ್ಯ ಸಮರ್ಪಣೆಯು ಕಲಾಪ್ರೇಮಿಗಳ ಕಣ್ಮನ ಸೆಳೆಯಲು ಸಿದ್ಧವಾಗಿದೆ.



































