
ಉಡುಪಿ: ಮಣಿಪಾಲದಲ್ಲಿ ಗರುಡ ಗ್ಯಾಂಗ್‌ನ ಕುಖ್ಯಾತ ಸದಸ್ಯನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲು ಬಂದಿದ್ದ ನೆಲಮಂಗಲ ಪೊಲೀಸರನ್ನು ನೋಡಿ ಆರೋಪಿಯು ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ, ಜಂಟಿ ಕಾರ್ಯಾಚರಣೆಯ ಮೂಲಕ ಮಣಿಪಾಲ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಣಿಪಾಲದ ಮಣ್ಣಪಳ್ಳದ ಬಳಿ ನಡೆದ ಈ ಚೇಸ್ ಚಿತ್ರಕಥೆಗೂ ಸೆಡ್ಡು ಹೊಡೆಯುವಂತೆ ನಡೆದಿದ್ದು, ಪರಾರಿಯಾಗಲು ಯತ್ನಿಸಿದ ಆರೋಪಿಯು ನಾಲ್ಕು ಕಾರುಗಳು ಮತ್ತು ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಆತಂಕ ಸೃಷ್ಟಿಸಿದ್ದ. ಈ ಸಂದರ್ಭದಲ್ಲಿ ಮಣಿಪಾಲ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹಿಂಬಾಲಿಸಿ ಬಂಧಿಸಿದರು. ಆರೋಪಿಯು ಇಸಾಕ್ ಎಂಬಾತನಾಗಿದ್ದು, ಗರುಡ ಗ್ಯಾಂಗ್‌ನ ಪ್ರಮುಖ ಸದಸ್ಯನಾಗಿದ್ದಾನೆ.
ಈ ಘಟನೆಯ ವೇಳೆ ಆರೋಪಿಯ ಜೊತೆ ಕಾರಿನಲ್ಲಿ ಒಬ್ಬ ಯುವತಿಯೂ ಪತ್ತೆಯಾಗಿದ್ದು, ಈಕೆಯ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇಸಾಕ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದರಿಂದ ಈತನ ವಿಚಾರಣೆಯನ್ನು ಮಣಿಪಾಲ ಮತ್ತು ನೆಲಮಂಗಲ ಪೊಲೀಸರು ಜಂಟಿಯಾಗಿ ನಡೆಸುತ್ತಿದ್ದಾರೆ.
