
ಪಾಟ್ನಾ : ಬಿಹಾರದಲ್ಲಿ ಗುರುವಾರ (ಜುಲೈ 17) ಬೆಳ್ಳಂಬೆಳಗ್ಗೆ ಭೀಕರ ಘಟನೆಯೊಂದು ನಡೆದಿದೆ. ಪಾಟ್ನಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಖ್ಯಾತ ಅಪರಾಧಿ ಚಂದನ್ ಮಿಶ್ರಾ ಅವರನ್ನು ಐವರು ಶಸ್ತ್ರಾಸ್ತ್ರಧಾರಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಇಡೀ ಘಟನೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿಯಲ್ಲಿ ಸೆರೆ: ಆಸ್ಪತ್ರೆಯೊಳಗೆ ನುಗ್ಗಿ ಗುಂಡಿನ ಸುರಿಮಳೆ
ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಐವರು ಬಂದೂಕುಧಾರಿಗಳು ಆಸ್ಪತ್ರೆಯೊಳಗೆ ನುಗ್ಗಿ, ಮಿಶ್ರಾ ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಬಾಗಿಲು ತೆರೆದು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ದಿಢೀರ್ ದಾಳಿಯಿಂದ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಕೊಲೆಗೀಡಾದ ಚಂದನ್ ಮಿಶ್ರಾ ಹಿನ್ನೆಲೆ
ಗುಂಡಿನ ದಾಳಿಗೆ ಬಲಿಯಾದ ಚಂದನ್ ಮಿಶ್ರಾ ಬಕ್ಸರ್ ಜಿಲ್ಲೆಯ ನಿವಾಸಿ. ಈತ ನಟೋರಿಯಸ್ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ಹಲವಾರು ಕೊಲೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗಷ್ಟೇ ವೈದ್ಯಕೀಯ ಕಾರಣಗಳಿಗಾಗಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ಮಿಶ್ರಾ, ಪಾಟ್ನಾದ ಪರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪೆರೋಲ್ ಮೇಲೆ ಹೊರಬಂದಿದ್ದ ಶರ್ಮಾನನ್ನು ಭದ್ರತೆಯ ದೃಷ್ಟಿಯಿಂದ ಬಕ್ಸರ್ ಜೈಲಿನಿಂದ ಭಾಗಲ್ಪುರ್ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಪೊಲೀಸರ ಪ್ರಾಥಮಿಕ ಶಂಕೆಯ ಪ್ರಕಾರ, ಇದು ಎದುರಾಳಿ ಗ್ಯಾಂಗ್‌ಗಳ ನಡುವಿನ ಹಳೆಯ ದ್ವೇಷದ ಪರಿಣಾಮವಾಗಿ ನಡೆದಿರುವ ಕೃತ್ಯವಾಗಿದೆ.
ತನಿಖೆ ಮುಂದುವರಿಕೆ: ಭದ್ರತಾ ಸಿಬ್ಬಂದಿಯ ಪಾತ್ರದ ಬಗ್ಗೆ ಶಂಕೆ
“ನಾವು ಎದುರಾಳಿ ಗ್ಯಾಂಗ್ ಸದಸ್ಯರ ಗುರುತು ಪತ್ತೆ ಹಚ್ಚಿದ್ದೇವೆ. ಈ ಘಟನೆಯಲ್ಲಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಳು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ತೀವ್ರ ತನಿಖೆ ನಡೆಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಕಾರ್ತಿಕೇಯಾ ಶರ್ಮಾ ತಿಳಿಸಿದ್ದಾರೆ. ಈ ಘಟನೆ ಪಾಟ್ನಾದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಆಸ್ಪತ್ರೆಗಳ ಭದ್ರತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.