
ಬೆಂಗಳೂರು: “ಮುಂದಿನ ಐದು ವರ್ಷವೂ ನಾನು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಮತ್ತೆ ಅದಾದ ಬಳಿಕವೂ ನಾನೇ ಸಿಎಂ ಆಗಿರುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಗ್ಯಾರಂಟಿ ಯೋಜನೆ ಅನುಷ್ಠಾನದ ಬಗ್ಗೆ ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, “ಹೇ… ಆಶೋಕ ಬರೆದುಕೊ, ನಾನೇ ಪರ್ಮನೆಂಟು” ಎಂದು ಉತ್ತರಿಸಿದ್ದರು.
ಸಿದ್ದರಾಮಯ್ಯ ಅವರ ಈ ಮಾತುಗಳಿಗೆ ಪ್ರತಿಯಾಗಿ ಆರ್. ಅಶೋಕ್ ಅವರು, “ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸಲಿ ಎಂದು ನಾವು ಬಯಸುತ್ತೇವೆ” ಎಂದು ಹಾರೈಸಿದರು. ಈ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಹೌದು, ಈ ಐದು ವರ್ಷ ಮಾತ್ರವಲ್ಲ, ಮತ್ತೆ ಮುಂದಿನ ಐದು ವರ್ಷವೂ ನಾವು ಅಧಿಕಾರದಲ್ಲೇ ಇರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕರು “ಆಗಲೂ ನೀವೇ ಸಿಎಂ ಆಗಿರುತ್ತೀರಾ?” ಎಂದು ಪ್ರಶ್ನಿಸಿದ್ದಾಗ, “ಹೌದು, ನಾನೇ ಇರುತ್ತೇನೆ” ಎಂದು ಸ್ಪಷ್ಟವಾಗಿ ಹೇಳಿದರು.ಸಿದ್ದರಾಮಯ್ಯ ಅವರ ಈ ಹೇಳಿಕೆ ಬಿಜೆಪಿ ಶಾಸಕರ ಪ್ರಶ್ನೆಗೆ ತೀಕ್ಷ್ಣ ಉತ್ತರ ನೀಡಿದಂತಾಗಿದ್ದು, ಸಿಎಂ ಸ್ಥಾನಕ್ಕೆ ಆಕಾಂಕ್ಷೆ ಹೊಂದಿರುವ ಕಾಂಗ್ರೆಸ್ ನಾಯಕರಲ್ಲೂ ಹೊಸ ಚರ್ಚೆಗೆ ಕಾರಣವಾಗಿದೆ.