
ಬುದೌನ್: ಅಪ್ರಾಪ್ತ ವಯಸ್ಸಿನ ಮಕ್ಕಳು ಮಾಡಿದ ತಪ್ಪಿಗೆ ಅವರ ಹೆತ್ತವರನ್ನು ಪೊಲೀಸರು ಬಂಧಿಸಿರುವ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಡೆದಿದೆ. 8 ನೇ ತರಗತಿಯ ವಿದ್ಯಾರ್ಥಿನಿಗೆ ದಾರಿಯುದ್ದಕ್ಕೂ ಅಶ್ಲೀಲ ಕಮೆಂಟ್‌ಗಳ ಮೂಲಕ ಕಿರುಕುಳ ನೀಡುತ್ತಿದ್ದ ನಾಲ್ವರು ಬಾಲಕರ ತಾಯಂದಿರನ್ನು ಪೊಲೀಸರು ಶನಿವಾರ ಜೈಲಿಗಟ್ಟಿದ್ದಾರೆ.
ಘಟನೆಯ ವಿವರ: ಬುದೌನ್ ಜಿಲ್ಲೆಯ ಉಷೈತ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 13 ವರ್ಷದೊಳಗಿನ ನಾಲ್ವರು ಹುಡುಗರು, ಅದೇ ಗ್ರಾಮದ ಶಾಲಾ ಬಾಲಕಿಯೊಬ್ಬಳಿಗೆ ನಿರಂತರವಾಗಿ ತೊಂದರೆ ನೀಡುತ್ತಿದ್ದರು. ಬಾಲಕಿ ಶಾಲೆಗೆ ಹೋಗುವಾಗ ಮತ್ತು ಬರುವಾಗ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಚುಡಾಯಿಸುವುದು ಇವರ ಕಾಯಕವಾಗಿತ್ತು. ಈ ವಿಷಯವನ್ನು ಬಾಲಕಿ ತನ್ನ ತಂದೆಯ ಗಮನಕ್ಕೆ ತಂದ ನಂತರ, ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರ ಕಠಿಣ ಕ್ರಮ: ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ, ಆರೋಪಿಗಳು 13 ವರ್ಷಕ್ಕಿಂತ ಕೆಳಗಿನವರಾದ್ದರಿಂದ ಅವರನ್ನು ಬಂಧಿಸುವ ಬದಲು, ಅವರ ಪೋಷಕರ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಿದರು. “ಮಕ್ಕಳಿಗೆ ಸರಿಯಾದ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಕಲಿಸದ ಕಾರಣ ಈ ಕೃತ್ಯ ನಡೆದಿದೆ. ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ” ಎಂದು ಪೊಲೀಸರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ನ್ಯಾಯಾಂಗ ಬಂಧನ ಮತ್ತು ಬಿಡುಗಡೆ: ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 170 ರ ಅಡಿಯಲ್ಲಿ ‘ಮುನ್ನೆಚ್ಚರಿಕೆ ಕ್ರಮ’ವಾಗಿ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿತ್ತು. ಇವರನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ, ವೈಯಕ್ತಿಕ ಬಾಂಡ್ ಪಡೆದು ಬಿಡುಗಡೆ ಮಾಡಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸಕ್ಕಾಗಿ ಹೊರರಾಜ್ಯಕ್ಕೆ ಹೋಗಿರುವ ಬಾಲಕರ ತಂದೆಯಂದಿರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಅವರು ಊರಿಗೆ ಬಂದ ತಕ್ಷಣ ಅವರನ್ನೂ ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.



































