
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಧರ್ಮಸ್ಥಳದ ಕುರಿತಾಗಲಿ ಅಥವಾ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧವಾಗಲಿ ಯಾರೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್‌ಐಟಿ ತನಿಖೆಯಲ್ಲಿ ಯಾವುದೇ ಸಾಕ್ಷ್ಯ ದೊರಕಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ‘ಕ್ಲಾರಿಟಿ’ ಬೇಕು ಎಂಬ ಕಾರಣಕ್ಕೆ ಎಸ್‌ಐಟಿ ರಚನೆ ಮಾಡಲಾಗಿದೆ. ಎಸ್‌ಐಟಿ ತಂಡವು ಈವರೆಗೆ 14ರಿಂದ 15 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದರೂ ಯಾವುದೇ ಸಾಕ್ಷ್ಯ ದೊರಕಿಲ್ಲ ಎಂದು ಹೇಳಿದರು. ಈ ಕುರಿತು ಸದನದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಲಿದ್ದಾರೆ ಎಂದರು.
ಬಿಜೆಪಿಯವರ ವಿರುದ್ಧ ವಾಗ್ದಾಳಿ
ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. “ಬಿಜೆಪಿಯವರಿಗಿಂತ ಕಾಂಗ್ರೆಸ್‌ನಲ್ಲಿ ಧರ್ಮಸ್ಥಳದ ಭಕ್ತರಿದ್ದಾರೆ” ಎಂದು ಹೇಳಿದ ಅವರು, ಸೌಜನ್ಯ ಪ್ರಕರಣಕ್ಕೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಯೂಟ್ಯೂಬರ್‌ಗಳು ಅಪಪ್ರಚಾರ ಮಾಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.