
ವಾಷಿಂಗ್ಟನ್: ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಕುಸಿತವಾಗಿರುವ ನಡುವೆಯೇ ಪ್ರತಿಸುಂಕದ ಬಗ್ಗೆ ಸ್ಪಷ್ಟ ನಿಲುವು ತಿಳಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇದರಿಂದ ಹಿಂದೆ ಸರಿಯುವುದಿಲ್ಲ” ಎಂದು ಘೋಷಿಸಿದ್ದಾರೆ.
“ಆರೋಗ್ಯ ಸುಧಾರಣೆಗೆ ಔಷಧ ತೆಗೆದುಕೊಳ್ಳಬೇಕಾದಂತೆ, ಕೆಲವೊಮ್ಮೆ ಇಂತಹ ಕಠಿನ ನಿರ್ಧಾರಗಳು ಅಗತ್ಯವಾಗುತ್ತವೆ. ಅನೇಕ ರಾಷ್ಟ್ರ ನಾಯಕರು ಅಮೆರಿಕದೊಂದಿಗೆ ಒಪ್ಪಂದ ಬಯಸುತ್ತಿದ್ದಾರೆ. ನಷ್ಟ ನನಗೂ ಇಷ್ಟವಿಲ್ಲ, ಆದರೆ ಸರಿಪಡಿಸುವ ಪ್ರಕ್ರಿಯೆಯಲ್ಲಿ ಇದನ್ನು ಸಹಿಸಬೇಕು.”ಎಂದು ಟ್ರಂಪ್ ಹೇಳಿದ್ದಾರೆ.
ಹಿಂದಿನ ಸರ್ಕಾರದ ಬಗ್ಗೆ ಕಿಡಿ ಕಾರಿದ ಟ್ರಂಪ್, “ಮೂರ್ಖ ನಾಯಕತ್ವದ ಫಲವಾಗಿ ಇತರ ರಾಷ್ಟ್ರಗಳು ಅಮೆರಿಕವನ್ನು ದುರ್ಬಳಕೆ ಮಾಡಿಕೊಂಡಿವೆ” ಎಂದು ಟೀಕಿಸಿದರು. “ಚೀನದೊಂದಿಗೆ ವ್ಯಾಪಾರ ಕೊರತೆಯ ಸಮಸ್ಯೆ ಬಗೆಹರಿಸಲಿಲ್ಲದಿದ್ದರೆ ಒಪ್ಪಂದವಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದಕ್ಕೂ ಮಧ್ಯೆ, ಜಾಗತಿಕ ಷೇರು ಮಾರುಕಟ್ಟೆ ಕುಸಿತ ತಡೆಯುವ ಪ್ರಯತ್ನವಾಗಿ ಅಮೆರಿಕದ ಪ್ರತಿಸುಂಕ ಘೋಷಣೆಗೆ 90 ದಿನಗಳ ತಾತ್ಕಾಲಿಕ ವಿರಾಮದ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಶ್ವೇತಭವನ ಈ ವರದಿಗಳನ್ನು ಸುಳ್ಳು ಎಂದು ತಿರಸ್ಕರಿಸಿದೆ.