
ಉಡುಪಿ : ಕಾರ್ಕಳ ತಾಲೂಕಿನ ನಿಟ್ಟೆ ಪರಪ್ಪಾಡಿಯ ಅಭಿಷೇಕ್ ಆಚಾರ್ಯ (23) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೆ ಹನಿಟ್ರ್ಯಾಪ್‌ಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಬಯೋ ಮೆಡಿಕಲ್ ಆಗಿದ್ದ ಅಭಿಷೇಕ್ ಆಚಾರ್ಯ ಅವರು ಅ. 9ರಂದು ಬೆಳ್ಮಣ್‌ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಯುವತಿ ಸೇರಿದಂತೆ ನಾಲ್ವರು ಗೆಳೆಯರು ಹಣಕ್ಕಾಗಿ ಬ್ಲಾಕ್‌ಮೆಲ್ ಮಾಡಿ ಕಿರುಕುಳ ನೀಡುತ್ತಿರುವುದಾಗಿ ಅವರು ಡೆತ್‌ನೋಟು ಬರೆದಿಟ್ಟು ಹೋಗಿದ್ದರು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಮೊಬೈಲ್, ಲ್ಯಾಪ್‌ಟಾಪ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ವಹಿವಾಟು, ಫೋನ್ ಕರೆ ಮತ್ತು ಚಾಟ್ ದಾಖಲೆಗಳನ್ನು ಆಧರಿಸಿ ವಿಚಾರಣೆ ನಡೆಸಲಾಗಿದೆ.
ಯುವತಿಯ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಸಿಕ್ಕಿಲ್ಲ
ಎಸ್ಪಿ ಹರಿರಾಂ ಶಂಕರ್ ನೀಡಿರುವ ಮಾಹಿತಿ ಪ್ರಕಾರ, ‘ಆರೋಪಿ ಯುವತಿಯ ಮೊಬೈಲ್‌ನಲ್ಲಿ ಯಾವುದೇ ರೀತಿಯ ಅಶ್ಲೀಲ ಫೋಟೋ ಅಥವಾ ವಿಡಿಯೋಗಳು ಸಿಕ್ಕಿಲ್ಲ ಮತ್ತು ಆಕೆ ಯಾವುದೇ ವಿಡಿಯೋವನ್ನು ಯಾರಿಗೂ ಕಳುಹಿಸಿರುವುದಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅಭಿಷೇಕ್ ಯುವತಿಗೆ ಕಳುಹಿಸಿದ್ದ ಹಣವನ್ನು ಅವಳು ಅದೇ ದಿನ ವಾಪಸ್ಸು ಕೊಟ್ಟಿರುವುದು ಕಂಡು ಬಂದಿದೆ’.
ಆದರೆ, ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಅವರು ಆರೋಪಿ ಯುವತಿಯ ಸ್ನೇಹಿತೆಯ ಅಶ್ಲೀಲ ವಿಡಿಯೋವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಸಹೋದ್ಯೋಗಿಗಳ ವಾಟ್ಸಾಪ್ ಗ್ರೂಪ್‌ಗೆ ಹಂಚಿದ್ದರು. ಈ ವಿಷಯ ತಿಳಿದ ನಂತರ, ಆಕೆ ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಆತನಿಗೆ ತಿಳಿಸಿದ್ದಳು.
ಈಗ ವೈರಲ್ ಆಗುತ್ತಿರುವ ವಿಡಿಯೋವನ್ನು ಆರೋಪಿ ಯುವತಿಯ ಸ್ನೇಹಿತೆಯೇ ತನ್ನ ಉಡುಪು ಬದಲಿಸುವ ಸಮಯದಲ್ಲಿ ಸ್ವತಃ ರೆಕಾರ್ಡ್ ಮಾಡಿ, ಆ ಯುವತಿಗೆ ಖಾಸಗಿ ರೀತಿಯಲ್ಲಿ ವಾಟ್ಸಾಪ್ ಮೂಲಕ ಕಳುಹಿಸಿದ್ದಳು. ಆದರೆ ಆ ವಿಡಿಯೋವನ್ನು ಅಭಿಷೇಕ್, ಯುವತಿಯ ವಾಟ್ಸಾಪ್ ಮೂಲಕ ಪಡೆದಿದ್ದನು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಪ್ರತ್ಯೇಕ ಪ್ರಕರಣಗಳು ದಾಖಲು
- “ಡ್ರೆಸ್ ಬದಲಿಸುವ ವಿಡಿಯೋದಲ್ಲಿ ಕಾಣಿಸಿಕೊಂಡ ಯುವತಿ, ತನ್ನ ಅನುಮತಿಯಿಲ್ಲದೆ ವಿಡಿಯೋ ತೆಗೆದ ಬಗ್ಗೆ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.”
- “ಆರೋಪಿ ಯುವತಿಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ ಪ್ರಕರಣದ ಬಗ್ಗೆಯೂ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ,” ಎಂದು ಎಸ್ಪಿ ತಿಳಿಸಿದ್ದಾರೆ.
ಅಭಿಷೇಕ್ ಅವರ ಮೊಬೈಲ್‌ನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಡೆತ್‌ನೋಟ್‌ನಲ್ಲಿನ ಕೈಬರಹ ದೃಢೀಕರಣ ಕಾರ್ಯ ಪ್ರಗತಿಯಲ್ಲಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೃತ ಅಭಿಷೇಕ್ ಮತ್ತು ಆರೋಪಿ ಯುವತಿ ಕುರಿತು ಅಶ್ಲೀಲ ಪೋಸ್ಟ್‌ಗಳು ಹರಿದಾಡುತ್ತಿದ್ದು, ಇವುಗಳು ಕಾನೂನಾತ್ಮಕವಾಗಿ ಶಿಕ್ಷಾರ್ಹ ವಾಗಿವೆ ಎಂದು ಎಸ್ಪಿ ಎಚ್ಚರಿಸಿದ್ದಾರೆ.



































