
ಹೊಸದಿಲ್ಲಿ: 2019ರಲ್ಲಿ ಭಾರತದಿಂದ ಪಲಾಯನ ಮಾಡಿದ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ದಕ್ಷಿಣ ಅಮೆರಿಕದ ಬೊಲೀವಿಯಾದ ಬುಡಕಟ್ಟು ಜನರನ್ನು ವಂಚಿಸಿ ಭೂಮಿ ಸ್ವಾಧೀನಕ್ಕೆ ಮುಂದಾದ ಆರೋಪ ಕೇಳಿಬಂದಿದೆ. ಈ ಕುರಿತು ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ವರದಿ ಮಾಡಿದ್ದು, ಆದರೆ ಈ ಆರೋಪಗಳನ್ನು ನಿತ್ಯಾನಂದ ತಳ್ಳಿ ಹಾಕಿದ್ದಾರೆ.
ಕೈಲಾಸ ವಿಸ್ತರಣೆಗೆ ನಿತ್ಯಾನಂದರ ಪ್ಲಾನ್!
ನಿತ್ಯಾನಂದ ಈಕ್ವೆಡಾರ್‌ನಲ್ಲಿ ಸ್ಥಾಪಿಸಿರುವ “ಕೈಲಾಸ” ದೇಶವನ್ನು ವಿಸ್ತರಿಸಲು ಬೊಲೀವಿಯಾದ ಅಮೆಜಾನ್ ಅರಣ್ಯದ 4.8 ಲಕ್ಷ ಹೆಕ್ಟೇರ್ ಭೂಮಿ ಗುತ್ತಿಗೆ ಪಡೆದಿದ್ದರು. 1000 ವರ್ಷಗಳ ಕಾಲ ಕೇವಲ ₹8.96 ಲಕ್ಷ ದರಕ್ಕೆ ಅವರು ಈ ಒಪ್ಪಂದ ಮಾಡಿದ್ದರು ಎಂದು ವರದಿಯಾಗಿದೆ. ಆದರೆ, ಬೊಲೀವಿಯಾ ಸರ್ಕಾರಕ್ಕೆ ಇದನ್ನು ಕುರಿತು ಮಾಹಿತಿ ಸಿಕ್ಕಿದ ಕೂಡಲೇ ಒಪ್ಪಂದವನ್ನು ರದ್ದು ಮಾಡಲಾಗಿದೆ.
ಬೆಂಗಳೂರು ನಗರಕ್ಕಿಂತ 5.3 ಪಟ್ಟು ದೊಡ್ಡ ಭೂಮಿ!
ನಿತ್ಯಾನಂದರ ಗುತ್ತಿಗೆ ಬೆಂಗಳೂರು ನಗರಕ್ಕಿಂತ 5.3 ಪಟ್ಟು, ದಿಲ್ಲಿಗಿಂತ 2 ಪಟ್ಟು ಹಾಗೂ ಮುಂಬಯಿಗಿಂತ 6.5 ಪಟ್ಟು ದೊಡ್ಡದು! ಆದರೆ, ಬೊಲೀವಿಯಾದ ಕಾನೂನಿನ ಪ್ರಕಾರ ವಿದೇಶಿಗರಿಗೆ ಭೂ ಸ್ವಾಮ್ಯ ಹಕ್ಕಿಲ್ಲ, ಹಾಗಾಗಿ ಸರ್ಕಾರ ತಕ್ಷಣವೇ ಒಪ್ಪಂದವನ್ನು ಅಮಾನ್ಯಗೊಳಿಸಿದೆ.
ನಿತ್ಯಾನಂದರ ಪ್ರತಿಕ್ರಿಯೆ
“ಕೈಲಾಸ ಅನೇಕ ದೇಶಗಳೊಂದಿಗೆ ರಾಜತಾಂತ್ರಿಕ ಒಪ್ಪಂದ ಮಾಡಿಕೊಂಡಿದೆ. ಬುಡಕಟ್ಟು ಜನರು ನಮ್ಮ ಜತೆಗಿದ್ದಾರೆ. ಭೂಮಿ ವಂಚನೆ ಆರೋಪ ಸುಳ್ಳು!” ಎಂದು ನಿತ್ಯಾನಂದ ಸ್ವಾಮಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.