
ಕಾರ್ಕಳ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಮಂಗಳೂರು ಇವರು 2024-25ನೇ ಸಾಲಿನ ತಾಲೂಕುವಾರು ಉತ್ತಮ ಗುಣಮಟ್ಟದ ಸಂಘ ಪ್ರಶಸ್ತಿಗೆ ನೀರೆ ಬೈಲೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆಯ್ಕೆ ಮಾಡಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಜುಲೈ 30ರಂದು ಕಾರ್ಕಳದಲ್ಲಿ ನಡೆದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ, ಮಂಗಳೂರು ಇದರ ತಾಲೂಕು ಸಭೆಯ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ನೀರೆ ಬೈಲೂರು ಹಾಲು ಉತ್ಪಾದಕರ ಸಹಕಾರ ಸಂಘವು ಹಾಲು ಉತ್ಪಾದನೆ ಮತ್ತು ಗುಣಮಟ್ಟ ನಿರ್ವಹಣೆಯಲ್ಲಿ ತೋರಿದ ಅಸಾಧಾರಣ ಕಾರ್ಯಕ್ಷಮತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಂಘವು ತನ್ನ ಸದಸ್ಯರಿಗೆ ಉತ್ತಮ ಸೇವೆಗಳನ್ನು ಒದಗಿಸುವುದರ ಜೊತೆಗೆ, ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಮಹತ್ವದ ಕೊಡುಗೆ ನೀಡಿದೆ.
ಪ್ರಶಸ್ತಿಯನ್ನು ನೀರೆ ಬೈಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಶೆಟ್ಟಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಂದೇಶ್ ಶೆಟ್ಟಿ ಅವರು ಒಕ್ಕೂಟದ ಪದಾಧಿಕಾರಿಗಳಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರುಗಳು, ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಈ ಪ್ರಶಸ್ತಿಯು ನೀರೆ ಬೈಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯವೈಖರಿ ಮತ್ತು ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕ್ರಮಗಳಿಗೆ ಸಂದ ಗೌರವವಾಗಿದೆ. ಇದು ಸಂಘದ ಮುಂದಿನ ಕಾರ್ಯಗಳಿಗೆ ಮತ್ತಷ್ಟು ಸ್ಫೂರ್ತಿ ನೀಡಲಿದೆ ಎಂದು ಸಂಘದ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.