
ಬೆಂಗಳೂರು:ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಆಗಮಿಸಿ ನೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ, ‘ಭೀಮ ಹೆಜ್ಜೆ ಶತಮಾನ ಸಂಭ್ರಮ’ ಬೈಕ್ ರ್ಯಾಲಿಗೆ ಇಂದು ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಡಾ. ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್‌ನ ಮನೋಭಾವನೆ ತಿರಸ್ಕಾರದ್ದಾಗಿದೆ. ನಿಪ್ಪಾಣಿಗೆ ಅಂಬೇಡ್ಕರ್ ಬಂದು ನೂರು ವರ್ಷ ಕಳೆದರೂ, ತಮ್ಮನ್ನು ದಲಿತರ ಪಕ್ಷ ಎಂದು ಕರೆದುಕೊಳ್ಳುವ ಕಾಂಗ್ರೆಸ್‌ನಿಂದ ಈ ಕುರಿತು ಒಬ್ಬ ನಾಯಕರೂ ಮಾತು ಹೇಳಿಲ್ಲ” ಎಂದು ಟೀಕಿಸಿದರು.
ಅಂಬೇಡ್ಕರ್ ಗೆದ್ದ ಹಿಂದೂ ಬಾಹುಳ್ಯ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ನಿಲುವು ಕಾಂಗ್ರೆಸ್‌ನದ್ದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವಿರುದ್ಧ 1952 ಮತ್ತು 1954ರ ಚುನಾವಣೆಯಲ್ಲಿ ತಂತ್ರ ರೂಪಿಸಿ ಸೋಲಿಸಲು ನೋಡಿದ ಘಟನೆಗಳನ್ನೂ ಅವರು ಉಲ್ಲೇಖಿಸಿದರು.
ಅಲ್ಲದೆ, “ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸೂಕ್ತ ಜಾಗ ನೀಡಲಿಲ್ಲ, ಸಂಸತ್ ಭವನದಲ್ಲಿ ಅವರ ತೈಲಚಿತ್ರ ಅನಾವರಣಕ್ಕೂ ಅವಕಾಶ ನೀಡಲಿಲ್ಲ” ಎಂಬ ಆರೋಪವನ್ನೂ ಪ್ರಹ್ಲಾದ ಜೋಶಿ ಮಾಡಿದರು.
ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಪಕ್ಷದ ಸಭೆಯಲ್ಲಿ ಕುರ್ಚಿ ನೀಡದೆ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ದಲಿತ ವಿರೋಧಿ ಮನಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.
ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಆರ್. ಅಶೋಕ್, “ದಲಿತರ ತುಳಿತದ ಹಿಂದೆ ಕಾಂಗ್ರೆಸ್‌ನ ಬೃಹತ್ ಇತಿಹಾಸವಿದೆ” ಎಂದರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಮೋಹನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹಾಜರಿದ್ದರು.
ನಿಪ್ಪಾಣಿಯಲ್ಲಿ ಭೀಮ ಹೆಜ್ಜೆ ಸಮಾರೋಪ:
ಏಪ್ರಿಲ್ 15ರಂದು ನಿಪ್ಪಾಣಿಯಲ್ಲಿ ಭೀಮ ಹೆಜ್ಜೆ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಬೈಕ್ ರ್ಯಾಲಿ ತಂಡಗಳು ನಿಪ್ಪಾಣಿ ಮಾರ್ಗವಾಗಿ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿವೆ.