
ಕರ್ನಾಟಕ ರಾಜ್ಯದಾದ್ಯಂತ ಮುಂದಿನ 2 ದಿನಗಳ ಕಾಲ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಕರಾವಳಿ ಭಾಗದಲ್ಲಿ ಹೆಚ್ಚು ಎಚ್ಚರಿಕೆ: ಕರಾವಳಿ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಗುಡುಗು ಮಿಂಚುಗಳ ಸಹಿತ ಅತಿಯಾದ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯದ ಕಾರಣ ಸಮುದ್ರದಲ್ಲಿ ಭಾರಿ ಅಲೆಗಳು ಮತ್ತು ಪ್ರತಿಕೂಲ ಪರಿಸ್ಥಿತಿ ಉಂಟಾಗುವ ಅಪಾಯ ಇರುವುದರಿಂದ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಒಳನಾಡಿನ ಜಿಲ್ಲೆಗಳ ಪರಿಸ್ಥಿತಿ: ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಹ ವ್ಯಾಪಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳ ಜನತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.
ದೇಶಾದ್ಯಂತ ಮುಂಗಾರು ಅಬ್ಬರ: ಇದೇ ವೇಳೆ, ರಾಷ್ಟ್ರಮಟ್ಟದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಸುರಿಯುವ ದೀರ್ಘಾವಧಿಯ ಸರಾಸರಿ ಮಳೆಯಾದ 75.4 ಮಿಲಿ ಮೀಟರ್‌ಗಿಂತಲೂ ಶೇಕಡ 115ಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಡಾ. ಮೃತ್ಯುಂಜಯ್ ಮೊಹಪಾತ್ರ ಅವರು ಮಾಹಿತಿ ನೀಡಿದ್ದಾರೆ. ನಿರೀಕ್ಷೆಗಿಂತ ಹೆಚ್ಚು ಮಳೆ ಆಗುತ್ತಿರುವುದು ಈ ವರ್ಷದ ವಿಶೇಷವಾಗಿದೆ.



































