
ಶಿಲ್ಲಾಂಗ್ (ಮೇಘಾಲಯ): ಹನಿಮೂನ್‌ಗಾಗಿ ಮೇಘಾಲಯದ ಶಿಲ್ಲಾಂಗ್‌ಗೆ ತೆರಳಿದ್ದ ಮಧ್ಯಪ್ರದೇಶದ ನವವಿವಾಹಿತ ದಂಪತಿ ನಾಪತ್ತೆಯಾಗಿರುವ ಘಟನೆ ಅಲ್ಲಿನ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ಸುತ್ತ ಮುತ್ತಲಿನ ನಿಗೂಢತೆ ಗಾಢವಾಗಿದೆ.
ಇಂದೋರ್‌ನ ರಾಜಾ ರಘುವಂಶಿ ಹಾಗೂ ಪತ್ನಿ ಸೋನಮ್ ಅವರು ಮೇ 11ರಂದು ವಿವಾಹವಾಗಿದ್ದು, ಮೇ 20ರಂದು ಹನಿಮೂನ್ ಪ್ರಯಾಣ ಆರಂಭಿಸಿದ್ದರು. ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ದಂಪತಿ ಶಿಲ್ಲಾಂಗ್‌ಗೆ ಬಂದಿದ್ದರು. ಶಿಲ್ಲಾಂಗ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಚಿರಾಪುಂಜಿಗೆ (ಸೊಹ್ರಾ) ಭೇಟಿ ನೀಡಲು ದ್ವಿಚಕ್ರ ವಾಹನ ಬಾಡಿಗೆಗೆ ತೆಗೆದುಕೊಂಡಿದ್ದರು.
ಮೇ 23ರಂದು ರಾಜಾ ತನ್ನ ತಾಯಿಯೊಂದಿಗೆ ಕೊನೆಯ ಬಾರಿ ದೂರವಾಣಿ ಸಂಭಾಷಣೆ ನಡೆಸಿದ್ದು, ನಂತರದಿಂದ ಅವರಿಬ್ಬರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಮೇ 24ರಿಂದ ಅವರೊಡನೆ ಸಂಪರ್ಕ ದೊರೆತಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮಾಲೀಕನ ಹೇಳಿಕೆಯಂತೆ, ಬಾಡಿಗೆಗೆ ಪಡೆದ ಆಕ್ಟಿವಾ ಸ್ಕೂಟರ್ ಸೊಹ್ರಾರಿಮ್ ಎಂಬ ಹಳ್ಳಿಯ ಹಳ್ಳದ ಸಮೀಪ ಪತ್ತೆಯಾಗಿದೆ, ಆದರೆ ದಂಪತಿಯು ಎಲ್ಲೂ ಪತ್ತೆಯಾಗಿಲ್ಲ.
ಇದಕ್ಕೂ ಮುನ್ನ ಈಸ್ಟ್ ಖಾಸಿ ಹಿಲ್ಸ್ ಬಳಿ ಹಂಗೇರಿಯ ಪ್ರವಾಸಿಗ ಪುಸ್ಕಾಸ್ ಝೂಲ್ಡ್ ಶವವಾಗಿ ಪತ್ತೆಯಾದದ್ದು ಈಗ ಈ ದಂಪತಿಗಳ ನಾಪತ್ತೆ ಪ್ರಕರಣ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಂಭೀರ ಆತಂಕವನ್ನು ಎಬ್ಬಿಸಿದೆ. ಇದೀಗ ನವ ದಂಪತಿಯ ನಾಪತ್ತೆ ಪ್ರಕರಣ ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಪ್ರಸ್ತುತ ಪೊಲೀಸರು, ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಸಂಯುಕ್ತ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ಸಂಭವಿಸಿದ ಪ್ರದೇಶದಲ್ಲಿ ದಟ್ಟ ಕಾಡುಗಳು, ಇಳಿಜಾರು ಪ್ರದೇಶ ಹಾಗೂ ಆಳವಾದ ಹಳ್ಳಗಳಿದ್ದ ಕಾರಣ ಕಾರ್ಯಾಚರಣೆ ಸವಾಲಿನ ಕಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ದಂಪತಿ ಯಾವುದಾದರೂ ರೆಸಾರ್ಟ್‌ನಲ್ಲಿ ತಂಗಿದ್ದಾರಾ ಅಥವಾ ಅಪರಾಧ ಚಟುವಟಿಕೆಗಳಿಗೆ ಬಲಿಯಾದರಾ ಎಂಬುದು ಇನ್ನೂ ಪತ್ತೆಯಾಗಿಲ್ಲ. ಘಟನೆ ಸಂಬಂಧಿಸಿದಂತೆ ಸ್ಥಳೀಯ ರೆಸಾರ್ಟ್‌ಗಳಿಗೂ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.