
ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತಿದ್ದಾಗಿ ಆರೋಪಿಸಿದ್ದ ಮುಸುಕುಧಾರಿ, ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ. ವಿಶೇಷ ತನಿಖಾ ತಂಡ (ಎಸ್ಐಟಿ) ಮುಂದೆ ಆತ ನೀಡಿರುವ ಹೇಳಿಕೆ ಕುತೂಹಲ ಕೆರಳಿಸಿದ್ದು, ತನ್ನನ್ನು ಮೂವರ ಗುಂಪು ತಪ್ಪು ಹೇಳಿಕೆ ನೀಡುವಂತೆ ಬಲವಂತಪಡಿಸಿತ್ತು ಎಂದು ಬಾಯ್ಬಿಟ್ಟಿದ್ದಾನೆ.
ಮೂವರ ಗುಂಪಿನಿಂದ ಬುರುಡೆ: ಮುಸುಕುಧಾರಿ ಹೇಳಿಕೆ
ಕಾನೂನು ಪ್ರಕಾರವೇ ಶವಗಳನ್ನು ಹೂತಿದ್ದರೂ, ಕಾನೂನು ಉಲ್ಲಂಘಿಸಿ ಹೂತಿದ್ದಾಗಿ ಹೇಳುವಂತೆ ಮೂವರ ಗುಂಪು 2023ರಲ್ಲಿ ತನ್ನನ್ನು ತಮಿಳುನಾಡಿನಿಂದ ಕರೆದುಕೊಂಡು ಬಂದಿತ್ತು ಎಂದು ಮುಸುಕುಧಾರಿ ತಿಳಿಸಿದ್ದಾನೆ. ಸುಜಾತ ಭಟ್ ದೂರು ನೀಡುವ ತನಕ ಏನನ್ನೂ ಹೇಳಬಾರದು ಎಂದು ಆ ಗುಂಪು ಸೂಚಿಸಿತ್ತು. ದೂರು ನೀಡಿದ ಬಳಿಕ ಬಂದು ಪೊಲೀಸರಿಗೆ ಶರಣಾಗುವಂತೆ ಹೇಳಿದ್ದರು ಎಂದು ಹೇಳಿದ್ದಾನೆ.
ಆ ಗುಂಪು ಹೇಳಿದಂತೆ ನಾನು ಮಾಡಿದ್ದೇನೆ, ಅವರು ನನಗೆ ‘ಬುರುಡೆ’ ಕೊಟ್ಟಿದ್ದರು. ಪೊಲೀಸರ ಮುಂದೆ ಏನು ಹೇಳಬೇಕು, ಕೋರ್ಟ್‌ನಲ್ಲಿ ಏನು ಹೇಳಬೇಕು ಎಂಬುದರ ಬಗ್ಗೆಯೂ ಅವರು ತರಬೇತಿ ನೀಡಿದ್ದರು. ನಾನು ಕಾನೂನು ಬದ್ಧವಾಗಿಯೇ ಶವಗಳನ್ನು ಹೂತಿದ್ದೆ ಎಂದು ಹಲವು ಬಾರಿ ಹೇಳಿದ್ದರೂ ಅವರು ಕೇಳಲಿಲ್ಲ ಎಂದು ಮುಸುಕುಧಾರಿ ಎಸ್ಐಟಿ ಮುಂದೆ ತಿಳಿಸಿದ್ದಾನೆ.
ವೀಡಿಯೊದಲ್ಲಿ ದಾಖಲಾದ ಸ್ಫೋಟಕ ಮಾಹಿತಿ
“ಮಹಿಳೆಯ ದೂರಿನ ನಂತರ ತಪ್ಪು ಹೇಳಿಕೆ ನೀಡುವಂತೆ ನನ್ನ ತಲೆಗೆ ತುಂಬಿದ್ದರು. ಪೊಲೀಸರ ಮುಂದೆ ಏನು ಹೇಳಬೇಕೆಂಬುದರ ಬಗ್ಗೆಯೂ ನನಗೆ ಹೇಳಿದ್ದರು” ಎಂದು ಮುಸುಕುಧಾರಿ ಹೇಳಿದ್ದು, ಆತನ ಈ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ವೀಡಿಯೊದಲ್ಲಿ ದಾಖಲಿಸಿಕೊಂಡಿದ್ದಾರೆ. ಈ ಹೊಸ ಮಾಹಿತಿ, ಧರ್ಮಸ್ಥಳ ಪ್ರಕರಣದ ಚರ್ಚೆಗೆ ಮತ್ತೊಂದು ಆಯಾಮವನ್ನು ನೀಡಿದೆ.