
ಉಡುಪಿ: ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ, ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿ ಕೆ. ಮಹೇಶ್ಚಂದ್ರ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಅವರಿಗೆ ಉಪವಿಭಾಗಾಧಿಕಾರಿ ಹುದ್ದೆಯ ಪ್ರಭಾರವನ್ನು ವಹಿಸಲಾಗಿದೆ.
ಭೂ ಬಳಕೆ ಬದಲಾವಣೆಯಲ್ಲಿ ಗಂಭೀರ ಅಕ್ರಮ?
ಮಹೇಶ್ ಚಂದ್ರ ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದಾಗ, ಬಡಾನಿಡಿಯೂರು ಗ್ರಾಮದಲ್ಲಿ ವಾಣಿಜ್ಯ ರೆಸಾರ್ಟ್ ನಿರ್ಮಾಣ ಸಂಬಂಧ ಭೂ ಉಪಯೋಗ ಬದಲಾವಣೆಗೆ ಸಂಬಂಧಿಸಿದ ಕಡತದಲ್ಲಿ ಅಕ್ರಮ ದಾಖಲೆ ಸೃಷ್ಟಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಉಡುಪಿ ಶಾಸಕರು ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಅಸಮಾಧಾನಕರ ಸಮಜಾಯಿಷಿ, ಅಮಾನತು ಆದೇಶ
ಇದೀಗ ಈ ಪ್ರಕರಣದ ಬಗ್ಗೆ ಮಹೇಶ್ ಚಂದ್ರರಿಂದ ಸಮಜಾಯಿಷಿ ಕೇಳಲಾಗಿತ್ತು. ಆದರೆ, ಅವರ ಉತ್ತರ ತೃಪ್ತಿಕರವಾಗಿಲ್ಲ ಎಂಬ ಕಾರಣದಿಂದ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿಯವರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮರು ನೇಮಕಗೊಂಡ ರಶ್ಮಿ
ಈ ಹಿಂದೆ ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಉಪವಿಭಾಗಾಧಿಕಾರಿ ರಶ್ಮಿ ಅವರನ್ನು ಸರಕಾರ ಪುನರ್ ನೇಮಕ ಮಾಡಲು ಆದೇಶ ಹೊರಡಿಸಿದೆ.