
ಉತ್ತರ ಪ್ರದೇಶ: ಸಮೋಸಾ ತರುವ ವಿಷಯದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ನಡೆದ ವಾಗ್ವಾದವು ಗಂಭೀರ ಸ್ವರೂಪ ಪಡೆದುಕೊಂಡು, ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರು ಸೇರಿ ಪತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಆನಂದಪುರದಲ್ಲಿ ವರದಿಯಾಗಿದೆ. ಹಲ್ಲೆಗೊಳಗಾದ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಆನಂದಪುರದ ನಿವಾಸಿ ಶಿವಂ ಎಂಬಾತನ ಮೇಲೆ ಆತನ ಪತ್ನಿ ಸಂಗೀತಾ, ಆಕೆಯ ತಂದೆ-ತಾಯಿ ರಾಮ್‌ಲಡೈಟ್ ಮತ್ತು ಉಷಾ ಹಾಗೂ ಸಂಬಂಧಿ ರಾಮೋತಾರ್ ಹಲ್ಲೆ ನಡೆಸಿದ್ದಾರೆ ಎಂದು ಶಿವಂ ಅವರ ತಾಯಿ ವಿಜಯ್ ಕುಮಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ವಿವರ:
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಶಿವಂ ಅವರ ಪತ್ನಿ ಸಂಗೀತಾ ತನ್ನ ಪತಿಯ ಬಳಿ ಸಮೋಸಾ ತರುವಂತೆ ಹೇಳಿದ್ದಳು. ಆದರೆ, ಶಿವಂ ಸಮೋಸಾ ತರಲು ನಿರಾಕರಿಸಿದಾಗ, ಸಂಗೀತಾ ಕೋಪಗೊಂಡಿದ್ದಳು. ಇದರಿಂದ ಅವರಿಬ್ಬರ ನಡುವೆ ಜಗಳ ಆರಂಭವಾಗಿ, ಸಂಗೀತಾ ತನ್ನ ತವರು ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಮಾರನೇ ದಿನ ಈ ವಿಷಯದ ಕುರಿತು ರಾಜಿ ಪಂಚಾಯಿತಿ ನಡೆಯುವಾಗಲೂ ಮಾತಿನ ಚಕಮಕಿ ಮುಂದುವರಿದಿದೆ. ಇದೇ ಸಂದರ್ಭದಲ್ಲಿ, ಸಂಗೀತಾ ಮತ್ತು ಆಕೆಯ ಕುಟುಂಬದ ಸದಸ್ಯರು ಶಿವಂ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ನಂತರ, ಶಿವಂ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವೃತ್ತಾಧಿಕಾರಿ ಪ್ರತೀಕ್ ದಹಿಯಾ ನೀಡಿರುವ ಮಾಹಿತಿ ಪ್ರಕಾರ, ಶಿವಂ ಅವರ ತಾಯಿ ವಿಜಯ್ ಕುಮಾರಿ ಅವರು ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮುಂದುವರೆದಿದೆ.