
ನವದೆಹಲಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಮತ್ತು ಅವರ ಇತರ ಆರು ಸಹ-ಆರೋಪಿಗಳಿಗೆ ಸುಪ್ರೀಂ ಕೋರ್ಟ್ ದೊಡ್ಡ ಹಿನ್ನಡೆ ನೀಡಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ ಸುಪ್ರೀಂ ಮಹತ್ವದ ಆದೇಶ ನೀಡಿದೆ. ಇದರ ಪರಿಣಾಮವಾಗಿ, ದರ್ಶನ್ ಮತ್ತು ಇತರರು ಮತ್ತೆ ಜೈಲಿಗೆ ಹಿಂತಿರುಗುವ ಸಾಧ್ಯತೆ ಹೆಚ್ಚಾಗಿದೆ.
ಹೈಕೋರ್ಟ್ 2024ರ ಡಿಸೆಂಬರ್‌ನಲ್ಲಿ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ಹೈಕೋರ್ಟ್‌ನ ಜಾಮೀನು ಆದೇಶದಲ್ಲಿ ದೋಷವಿದೆ ಎಂದು ಅಭಿಪ್ರಾಯಪಟ್ಟಿತು. ತಾಂತ್ರಿಕ ಕಾರಣಗಳನ್ನು ಮಾತ್ರ ಆಧರಿಸಿ ಜಾಮೀನು ನೀಡಲಾಗಿದೆ ಎಂದು ಪೀಠ ಹೇಳಿದೆ.
ಇಂದು ನಡೆದ ವಿಚಾರಣೆಯ ವೇಳೆ ಸರ್ಕಾರದ ಪರ ವಕೀಲರು ದರ್ಶನ್ ಅವರ ಪಾತ್ರದ ಬಗ್ಗೆ ಪ್ರಬಲ ಸಾಕ್ಷ್ಯಗಳನ್ನು ಮಂಡಿಸಿದರು. ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಉಪಸ್ಥಿತಿ, ಹಲ್ಲೆಯ ವಿಡಿಯೋ ಚಿತ್ರೀಕರಣ ಮತ್ತು ರಕ್ತದ ಕಲೆಗಳು ಕಂಡುಬಂದ ಬಟ್ಟೆಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಈ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಸುಪ್ರೀಂ ಕೋರ್ಟ್ ಪವಿತ್ರ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ, ದರ್ಶನ್ ಸೇರಿದಂತೆ ಎಲ್ಲ ಏಳು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಮತ್ತೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.