
ತಿರುಪತಿ: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ಜೆವಾ ಭಾನುವಾರ ರಾತ್ರಿ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ಪುತ್ರನ ಚೇತರಿಕೆಗೆ ಹೊತ್ತಿದ್ದ ಹರಕೆಯಂತೆ ಮುಡಿಕೊಟ್ಟು ಹರಕೆ ತೀರಿಸಿಕೊಂಡರು.
ಏಪ್ರಿಲ್ 8ರಂದು ಸಿಂಗಾಪುರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ದೇವರಲ್ಲಿ ಹರಕೆ ಹೊತ್ತಿದ್ದ ಪತ್ನಿ ಲೆಜ್ಜೆವಾ, ಈಗ ಮಗನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ತಿರುಪತಿಗೆ ತೆರಳಿ ಮುಡಿಕೊಟ್ಟು ದೇವರಿಗೆ ಕೃತಜ್ಞತೆ ಸಲ್ಲಿಸಿದರು.
ಭಾನುವಾರ ಪವನ್ ಕಲ್ಯಾಣ್ ಅವರ ಪತ್ನಿ ಮತ್ತು ಪುತ್ರ ಸಿಂಗಾಪುರದಿಂದ ಭಾರತಕ್ಕೆ ಮರಳಿದ್ದು, ಪವನ್ ಕಲ್ಯಾಣ್ ಅವರು ಸರಕಾರಿ ಕಾರ್ಯನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಲಾಗಲಿಲ್ಲ.ಲೆಜ್ಜೆವಾ ಅವರು ಮಾತ್ರ ಸ್ವತಃ ತಿರುಪತಿಗೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.