
ಜಾರ್ಖಂಡ್ : ಜಾರ್ಖಂಡ್‌ನ ಕಾಳಿ ದೇವಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಳ್ಳತನ ಮಾಡಲೆಂದು ದೇವಸ್ಥಾನದೊಳಗೆ ನುಗ್ಗಿದ್ದ ಕಳ್ಳನೊಬ್ಬ, ಕದ್ದ ವಸ್ತುಗಳ ಸಮೇತ ಅಲ್ಲೇ ಗಾಢ ನಿದ್ದೆಗೆ ಜಾರಿದ್ದಾನೆ.
ಕಳ್ಳ ವೀರ್ ನಾಯಕ್ ಸೋಮವಾರ ರಾತ್ರಿ ಮದ್ಯ ಸೇವಿಸಿ ನಂತರ ಕೃತ್ಯಕ್ಕೆ ಮುಂದಾಗಿದ್ದ. ಕಾಳಿ ದೇವಸ್ಥಾನದ ಮುಂಭಾಗದ ಗೋಡೆ ಹಾರಿ, ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ. ದೇವಾಲಯದ ಒಳಗಿದ್ದ ಕಾಳಿ ಮಾತೆಯ ವಿಗ್ರಹದ ಮೇಲಿನ ಆಭರಣಗಳು, ಪೂಜಾ ತಾಳಿ, ಲೋಟ, ಗಂಟೆ ಮತ್ತು ಅಲಂಕಾರಿಕ ಸಾಮಗ್ರಿಗಳನ್ನು ಚೀಲದಲ್ಲಿ ತುಂಬಿಸಿಕೊಂಡಿದ್ದಾನೆ. ಆದರೆ, ಕದ್ದ ಮಾಲುಗಳೊಂದಿಗೆ ಓಡಿಹೋಗಲು ಸಿದ್ಧತೆ ನಡೆಸುತ್ತಿದ್ದಾಗಲೇ ನಿದ್ದೆ ಆವರಿಸಿದ್ದು, ಅಲ್ಲೇ ಮಲಗಿ ನಿದ್ರೆಗೆ ಜಾರಿದ್ದಾನೆ.
ಮಂಗಳವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಭಕ್ತರು ಬಾಗಿಲು ಮುರಿದಿರುವುದನ್ನು ಗಮನಿಸಿ, ಒಳಗಡೆ ವ್ಯಕ್ತಿಯೊಬ್ಬ ಮಲಗಿರುವುದನ್ನು ಕಂಡಿದ್ದಾರೆ. ದೇವಸ್ಥಾನದ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಮಡಾ ಪೊಲೀಸರು, ಗಾಢ ನಿದ್ದೆಯಲ್ಲಿದ್ದ ಕಳ್ಳ ವೀರ್ ನಾಯಕ್‌ನನ್ನು ಎಬ್ಬಿಸಿ, ಕದ್ದ ಮಾಲುಗಳ ಸಮೇತ ವಶಕ್ಕೆ ಪಡೆದಿದ್ದಾರೆ.
ಬರಜಮ್ಡಾ ಒಪಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜೈಲಿಗೆ ಕಳುಹಿಸಲಾಗಿದೆ. ಕಳ್ಳತನಕ್ಕೆ ಬಂದ ಕಳ್ಳ ನಿದ್ರೆಗೆ ಜಾರಿ ಸಿಕ್ಕಿಬಿದ್ದ ಈ ಘಟನೆ ಸ್ಥಳೀಯವಾಗಿ ಸಖತ್ ವೈರಲ್ ಆಗಿದೆ.