
ಉಡುಪಿ : ಉಡುಪಿ ಜಿಲ್ಲೆ 80 ಬಡಗಬೆಟ್ಟು ಗ್ರಾಮದ ದಶರಥ ನಗರದಲ್ಲಿರುವ ಡೌನ್ ಟೌನ್ ಲಾಡ್ಜ್‌ನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಎಪ್ರಿಲ್ 22ರಂದು ಮಧ್ಯಾಹ್ನ ಬಂಧಿಸಿದ್ದಾರೆ. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರಾದವರು ಕಾಪು ಮೂಲದ ಮುಹಮ್ಮದ್ ಅಝರುದ್ದೀನ್, ಮಹಾರಾಷ್ಟ್ರದ ಪುಣೆಯಿಂದ ಬಂದ ರಾಜೇಶ್ ಪ್ರಕಾಶ್ ಜಾದವ್ ಮತ್ತು ಮಲ್ಪೆ ಮೂಲದ ನಾಝಿಲ್ ಅಲಿಯಾಸ್ ಆಸೀಫ್ ಎಂಬವರಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಪೋಲಿಸರು ದಾಳಿ ನಡೆಸಿ ಆರೋಪಿಗಳನ್ನು ಡೌನ್ ಟೌನ್ ಲಾಡ್ಜ್‌ನಲ್ಲಿದ್ದ ರೂಮಿನಲ್ಲಿ ಬಂಧಿಸಿದ್ದಾರೆ.
ಆರೋಪಿಗಳಿಂದ ಪೊಲೀಸರು ರೂ. 40,000 ಮೌಲ್ಯದ 13.70 ಗ್ರಾಂ ಎಂಡಿಎಂಎ (MDMA) ಮತ್ತು ರೂ. 10,500 ಮೌಲ್ಯದ 225 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜೊತೆಗೆ 15 ಪ್ಲಾಸ್ಟಿಕ್ ಕವರ್‌ಗಳು, ಐದು ಸಿರಿಂಜ್‌ಗಳು, ಮೂರು 5 ಎಂಎಲ್ ಸ್ಟಿರೈಲ್ ವಾಟರ್‌ನ ಪ್ಲಾಸ್ಟಿಕ್ ಸೀಸೆಗಳು ಹಾಗೂ ರೂ. 5,500 ಮೌಲ್ಯದ ಎರಡು ಮೊಬೈಲ್‌ಫೋನ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ.
ಈ ದಾಳಿಯು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯ ಕಠಿಣ ನಿಗಾವನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ.