
ನಾಂದೇಡ್, ಮಹಾರಾಷ್ಟ್ರ: ಜಾತಿ ಮತ್ತು ಕುಟುಂಬದ ಪ್ರತಿಷ್ಠೆಯ ಕಾರಣಕ್ಕಾಗಿ ಪ್ರೀತಿಯನ್ನು ನಿರಾಕರಿಸಿದಾಗ, ಪ್ರೀತಿ-ಪ್ರೇಮದ ಕಥೆಗಳು ಎಂತಹ ದುರಂತ ಅಂತ್ಯ ಕಾಣುತ್ತವೆ ಎಂಬುದಕ್ಕೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಮೂರು ವರ್ಷಗಳ ದೀರ್ಘ ಪ್ರೀತಿಗೆ ಹುಡುಗಿಯ ಮನೆಯವರೇ ಅಂತ್ಯ ಹಾಡಿರುವ ಭೀಕರ ಕೃತ್ಯವಿದು. ಆದರೆ, ಸಾವಿನಲ್ಲೂ ತಮ್ಮ ಪ್ರೀತಿ ಶಾಶ್ವತ ಎಂದು ಸಾರಲು ಯುವತಿ ತೆಗೆದುಕೊಂಡ ನಿರ್ಧಾರ ಎಲ್ಲರ ಮನ ಕರಗಿಸಿದೆ.
ತ್ಯಾಗಮಯ ಪ್ರೀತಿಯ ದುರಂತ ಅಂತ್ಯ
ನಾಂದೇಡ್ ಜಿಲ್ಲೆಯ ಆಂಚಲ್ ಮತ್ತು ಸಕ್ಷಾಮ್ (20) ಟೇಟ್ ಕಳೆದ 3 ವರ್ಷಗಳಿಂದ ಅನ್ಯೋನ್ಯವಾಗಿ ಪ್ರೀತಿಸುತ್ತಿದ್ದರು. ತಮ್ಮ ಸಹೋದರರ ಮೂಲಕ ಪರಿಚಯವಾದ ಇವರಿಬ್ಬರ ಬಾಂಧವ್ಯವು ದೃಢವಾದ ಪ್ರೀತಿಗೆ ತಿರುಗಿತ್ತು. ಮದುವೆಯಾಗುವ ಕನಸು ಕಂಡಿದ್ದ ಈ ಜೋಡಿಗೆ, ಇತ್ತೀಚೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಕ್ಷಾಮ್ ಬೇರೆ ಜಾತಿಯವನಾದ ಕಾರಣ ಆಂಚಲ್ ಕುಟುಂಬಸ್ಥರಿಗೆ ಈ ಸಂಬಂಧ ಸಹಿಸಲು ಸಾಧ್ಯವಾಗಲಿಲ್ಲ.
ವಿರೋಧದ ನಡುವೆಯೂ ಸಕ್ಷಾಮ್‌ನನ್ನೇ ಮದುವೆಯಾಗುವುದಾಗಿ ಆಂಚಲ್ ದೃಢವಾಗಿ ಹೇಳಿದ್ದಳು. ಇದು ಆಕೆಯ ಕುಟುಂಬದ ಕೋಪವನ್ನು ಹೆಚ್ಚಿಸಿತು. ಹೇಗಾದರೂ ಮಾಡಿ ಈ ಸಂಬಂಧವನ್ನು ಮುರಿಯಬೇಕು ಎಂದು ಸಂಕಲ್ಪ ಮಾಡಿದ ಆಂಚಲ್‌ನ ಕುಟುಂಬಸ್ಥರು, ಭೀಕರ ಯೋಜನೆ ರೂಪಿಸಿದರು. ಗುರುವಾರ (ನವೆಂಬರ್ 27) ಸಕ್ಷಾಮ್‌ನ ಮೇಲೆ ಹಲ್ಲೆ ನಡೆಸಿ, ಆತನ ತಲೆಗೆ ಗುಂಡು ಹಾರಿಸಿದ್ದಾರೆ. ಅಷ್ಟೇ ಅಲ್ಲದೆ, ಕಲ್ಲುಗಳಿಂದ ತಲೆ ಜಜ್ಜಿ ಆತನನ್ನು ಅತ್ಯಂತ ಕ್ರೂರವಾಗಿ ಕೊಲೆಗೈದಿದ್ದಾರೆ.
ಮೃತದೇಹಕ್ಕೆ ಮಾಂಗಲ್ಯ ಧಾರಣೆ
ತನ್ನ ಪ್ರಿಯಕರ ಇನ್ನು ಜೀವಂತವಾಗಿಲ್ಲ ಎಂಬ ಘೋರ ಸತ್ಯ ತಿಳಿದ ಆಂಚಲ್, ದುಃಖದ ಕಟ್ಟೆಯೊಡೆದು ಹೋಗಿದ್ದಳು. ಪ್ರೀತಿಯ ಕೊನೆಯ ಕ್ಷಣವಾಗಿ, ಸಕ್ಷಾಮ್‌ನ ಮನೆಗೆ ಹೋಗಿ ಆತನ ನಿಶ್ಚಲ ಮೃತದೇಹವನ್ನು ಅಪ್ಪಿಕೊಂಡಳು.
ಭಾವೋದ್ವೇಗಕ್ಕೆ ಒಳಗಾದ ಯುವತಿ, ಅಲ್ಲೇ ಮೃತದೇಹಕ್ಕೆ ಅರಿಶಿನ-ಕುಂಕುಮ ಹಚ್ಚಿ, ಸಿಂಧೂರವನ್ನು ಹಣೆಗಿಟ್ಟು, ಎಲ್ಲರ ಸಮ್ಮುಖದಲ್ಲಿಯೇ ಸಕ್ಷಾಮ್‌ನನ್ನು ಮದುವೆಯಾದಳು. “ನಾನು ಜೀವಂತವಿರುವವರೆಗೂ ನಿನ್ನ ಪತ್ನಿಯಾಗಿಯೇ ಇರುತ್ತೇನೆ” ಎಂದು ಭಾವುಕರಾಗಿ ನುಡಿದ ಆಂಚಲ್, “ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿತು, ನನ್ನ ತಂದೆ ಮತ್ತು ಸಹೋದರರು ಸೋತರು” ಎಂದು ನೋವಿನಿಂದ ಅಳಲು ತೋಡಿಕೊಂಡಿದ್ದಾಳೆ.
ತನ್ನ ಪ್ರಿಯಕರನ ಕೊಲೆಗೆ ಕಾರಣರಾದ ಮನೆಯವರಿಗೆ ಮರಣದಂಡನೆ ಶಿಕ್ಷೆ ಆಗಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ. ಈ ದುರಂತ ಪ್ರಕರಣ ಸಂಬಂಧ ಪೊಲೀಸರು ಆರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ.



































