
ನಾಗ್ಪುರ: ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ ಮಹಾರಾಷ್ಟ್ರದ ನಾಗ್ಪುರದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಆಟವಾಡುತ್ತಾ ತನ್ನ ಮೇಲೆ ಬಣ್ಣ ಎರಚಿದ ಎಂಬ ಕಾರಣಕ್ಕಾಗಿ ನಾಲ್ಕು ವರ್ಷದ ಪುಟ್ಟ ಬಾಲಕನ ಮೇಲೆ ವೃದ್ಧೆಯೊಬ್ಬರು ಕುದಿಯುವ ಬಿಸಿ ನೀರನ್ನು ಸುರಿದ ಘೋರ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ವಿಡಿಯೋದಲ್ಲಿ ಕಂಡುಬರುವಂತೆ, ಅಜ್ಜಿಯೊಬ್ಬರು ಬಕೆಟ್‌ನಲ್ಲಿ ನೀರು ಹಿಡಿದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಸ್ಪ್ರೇ ಗನ್ ಹಿಡಿದುಕೊಂಡು ಬಂದ ಬಾಲಕನು ತಮಾಷೆಗಾಗಿ ಅಜ್ಜಿಯ ಮೇಲೆ ಬಣ್ಣದ ನೀರನ್ನು ಹಾಕಲು ಮುಂದಾಗುತ್ತಾನೆ. ಅಜ್ಜಿ ಬೇಡವೆಂದು ವಾರಣ ಮಾಡಿದರೂ ಬಾಲಕ ಕುತೂಹಲದಿಂದ ನೀರು ಎರಚುತ್ತಾನೆ. ಇದರಿಂದ ಕ್ಷಣಾರ್ಧದಲ್ಲಿ ಕೆರಳಿದ ಆ ಮಹಿಳೆ, ಲವಲವಿಕೆಯಿಂದ ಆಟವಾಡುತ್ತಿದ್ದ ಬಾಲಕನ ಮೇಲೆ ತನ್ನ ಕೈಯಲ್ಲಿದ್ದ ಸುಡುವ ಬಿಸಿ ನೀರನ್ನು ಪೂರ್ತಿಯಾಗಿ ಚೆಲ್ಲಿದ್ದಾಳೆ. ಬಿಸಿನೀರು ಮೈಮೇಲೆ ಬೀಳುತ್ತಿದ್ದಂತೆಯೇ ಬಾಲಕ ನೋವಿನಿಂದ ಕಿರುಚುತ್ತಾ ಒದ್ದಾಡಿರುವುದು ಕಂಡವರ ಕರುಳು ಹಿಂಡುವಂತಿದೆ.
ತಕ್ಷಣವೇ ಪೋಷಕರು ಬಾಲಕನನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ದೇಹವು ಶೇ. 45 ರಷ್ಟು ಸುಟ್ಟುಹೋಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಮಾನವೀಯವಾಗಿ ವರ್ತಿಸಿದ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಹಬ್ಬದ ದಿನದಂದು ನಡೆದ ಈ ಘಟನೆಯು ಸಮಾಜದಲ್ಲಿ ಅಸಹಿಷ್ಣುತೆ ಎಷ್ಟು ಮಿತಿ ಮೀರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.



































