
ನಾಗಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತೀಯ ಜನತಾ ಪಕ್ಷದ ಮೂಲ ಸಿದ್ಧಾಂತ ಹಾಗೂ ಅಲ್ಪಸಂಖ್ಯಾತರ ಕುರಿತಾದ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯು ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ, ಬದಲಿಗೆ ಸಮಸ್ತ ಭಾರತೀಯರ ಏಳಿಗೆಗಾಗಿ ಶ್ರಮಿಸುವ ತತ್ವವನ್ನು ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.
ನಾಗ್ಪುರ ಮಹಾನಗರ ಪಾಲಿಕೆಯ ಮುಂಬರುವ ಚುನಾವಣಾ ಪ್ರಚಾರದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಗಳಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಹರಡುತ್ತಿರುವ ತಪ್ಪು ಕಲ್ಪನೆಗಳನ್ನು ತಳ್ಳಿಹಾಕಿದರು. “ಬಿಜೆಪಿಯ ಸಿದ್ಧಾಂತವು ಮುಸ್ಲಿಂ ವಿರೋಧಿಯಲ್ಲ. ನಾವು ವಿರೋಧಿಸುವುದು ಕೇವಲ ದೇಶದ್ರೋಹಿಗಳನ್ನು ಮತ್ತು ಭಯೋತ್ಪಾದನೆಯನ್ನು ಮಾತ್ರ. ಈ ಮಣ್ಣಿನ ಮೇಲೆ ಪ್ರೀತಿ ಇಟ್ಟು, ದೇಶಕ್ಕಾಗಿ ತ್ಯಾಗ ಮಾಡುವ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ನಮಗೆ ಹಿಂದೂಗಳಷ್ಟೇ ಗೌರವಾನ್ವಿತರು,” ಎಂದು ಗಡ್ಕರಿ ಮಾರ್ಮಿಕವಾಗಿ ನುಡಿದರು.
ನಾವೆಲ್ಲರೂ ಒಂದೇ ರಕ್ತವನ್ನು ಹಂಚಿಕೊಂಡಿರುವ ಭಾರತೀಯರು. ಪ್ರಾರ್ಥನಾ ಮಂದಿರಗಳು ಬೇರೆ ಇರಬಹುದು, ಆದರೆ ರಾಷ್ಟ್ರಪ್ರೇಮ ಎಂಬುದು ಎಲ್ಲರಲ್ಲೂ ಒಂದೇ ಆಗಿರಬೇಕು. ಅಭಿವೃದ್ಧಿ ಕೆಲಸಗಳಲ್ಲಿ ನಾವು ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನೀಡಿದ ಅವರು, ಜನವರಿ 15 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮೈತ್ರಿಕೂಟಕ್ಕೆ ಪೂರ್ಣ ಬಹುಮತ ಸಿಕ್ಕರೆ ಜನರ ಕನಸುಗಳನ್ನು ನನಸು ಮಾಡುವ ಹೊಣೆಗಾರಿಕೆಯನ್ನು ತಾವು ವೈಯಕ್ತಿಕವಾಗಿ ವಹಿಸಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.



































