
ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಮಾತ್ರವಲ್ಲ, ಎಲ್ಲರ ಆಸ್ತಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಮೈಸೂರು ಸಂಸದ ಯದುವೀರ್ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಹಾಸ್ಯಾಸ್ಪದ ಮತ್ತು ಆಘಾತಕಾರಿಯಾಗಿದೆ ಎಂದು ಯದುವೀರ್ ವಾಗ್ದಾಳಿ ನಡೆಸಿದ್ದಾರೆ. ಗೌರಿ ವಿನಾಯಕನ ಪೂಜೆ ನಡೆಯುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಖಂಡನೀಯ ಎಂದು ಅವರು ಹೇಳಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಮಾರ್ಕಂಡೇಯರು ಇಲ್ಲಿ ತಪಸ್ಸು ಮಾಡಿದ್ದಾರೆ ಎಂದು ಯದುವೀರ್ ಸ್ಮರಿಸಿದರು. ಆ ಸಮಯದಲ್ಲಿ ಬೌದ್ಧ ಧರ್ಮವೊಂದನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಗಳು ಇರಲಿಲ್ಲ. ನಮ್ಮ ಧರ್ಮದ ಕುರಿತು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದರು.
ಧಾರ್ಮಿಕ ಕೇಂದ್ರಗಳಿಗೆ ಎಲ್ಲರಿಗೂ ಪ್ರವೇಶವಿದೆ. ಆದರೆ ಪ್ರವೇಶ ಇದೆ ಎಂಬ ಕಾರಣಕ್ಕೆ ಅದು ಎಲ್ಲರಿಗೂ ಸೇರಿದ್ದು ಎನ್ನುವುದು ಸರಿಯಲ್ಲ. ಜಾತ್ಯಾತೀತ ದೃಷ್ಟಿಯಿಂದ ಇದನ್ನು ನೋಡಬಹುದೇ ಹೊರತು, ಧಾರ್ಮಿಕ ಕೇಂದ್ರದ ಮೇಲೆ ಹಕ್ಕು ಸಾಧಿಸುವುದು ಸರಿಯಲ್ಲ. ಇದು ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರ. ಸರ್ಕಾರದ ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳಿಂದ ಬೆಟ್ಟವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಕೇವಲ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ರಾಜಕೀಯ ಎಂದು ಯದುವೀರ್ ಆರೋಪಿಸಿದರು.
ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ:
ಈ ಹಿಂದೆಯೂ ಡಿ.ಕೆ. ಶಿವಕುಮಾರ್ ಅವರು ಆರ್.ಎಸ್.ಎಸ್ ಕುರಿತು ನೀಡಿದ ಹೇಳಿಕೆಗಳು ಮತ್ತು ನಂತರ ಕ್ಷಮೆ ಯಾಚಿಸಿದ ಘಟನೆಯನ್ನು ಯದುವೀರ್ ನೆನಪಿಸಿಕೊಂಡರು. ರಾಜ್ಯದಲ್ಲಿ ಅನೇಕ ಗಂಭೀರ ಸಮಸ್ಯೆಗಳಿರುವಾಗ ಸರ್ಕಾರ ಇಂತಹ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಟೀಕಿಸಿದರು. ಇಂತಹ ನಿರ್ಧಾರಗಳು ಹಿಂದೆಯೂ ನಡೆದಿವೆ. ಆದರೆ ಧರ್ಮದ ವಿಚಾರ ಬಂದಾಗ ನಾವು ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ನಡೆಸುವುದಾಗಿ ಯದುವೀರ್ ಎಚ್ಚರಿಕೆ ನೀಡಿದರು.
ಚಾಮುಂಡಿ ಬೆಟ್ಟವನ್ನು ಪ್ರಾಧಿಕಾರವಾಗಿ ಪರಿವರ್ತಿಸುವುದು ಸೂಕ್ತವಲ್ಲ. ಪ್ರಾಧಿಕಾರ ರಚಿಸಿದರೆ ಅದನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸಿ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಇದು ಸಂಭವಿಸಬಾರದು, ಚಾಮುಂಡಿ ಬೆಟ್ಟ ಧಾರ್ಮಿಕ ಕೇಂದ್ರವಾಗಿಯೇ ಉಳಿಯಬೇಕು ಎಂದು ಅವರು ಪ್ರತಿಪಾದಿಸಿದರು.