
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಅರಮನೆಯಲ್ಲಿ ರಾಜವಂಶಸ್ಥರ ಸಾಂಪ್ರದಾಯಿಕ ಆಯುಧ ಪೂಜಾ ಕೈಂಕರ್ಯಗಳು ವಿಧ್ಯುಕ್ತವಾಗಿ ಆರಂಭವಾಗಿವೆ.
ಅರಮನೆಯ ಪೂರ್ವಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ, ಬೆಳಗ್ಗೆ 7:55ಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನಿಸಲಾಯಿತು. ಅಲ್ಲಿ ಚಂಡಿಕಾಯಾಗದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜೆ ಮತ್ತು ಪೂರ್ಣಾಹುತಿ ಕಾರ್ಯಗಳನ್ನು ನೆರವೇರಿಸಿದರು.
ನಂತರ, ಆಯುಧಗಳನ್ನು ಅರಮನೆಯ ಆನೆ ಬಾಗಿಲು ಮೂಲಕ ಕಲ್ಯಾಣ ಮಂಟಪಕ್ಕೆ ತಂದು ಜೋಡಣೆ ಮಾಡಲಾಯಿತು. ಸಿಂಹಾಸನಕ್ಕೆ ಜೋಡಿಸಲಾಗಿದ್ದ ಸಿಂಹಕ್ಕೆ ಯದುವೀರರು ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿಸಲಿದ್ದಾರೆ.
ಕರಿಕಲ್ಲು ತೊಟ್ಟಿಯಲ್ಲಿ ಯದುವೀರರಿಂದ ಪೂಜಾ ಕೈಂಕರ್ಯ ನಡೆದ ನಂತರ, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ ಮತ್ತು ಪಟ್ಟದ ಹಸುಗಳಿಗೆ ಸಹ ಪೂಜೆ ಸಲ್ಲಿಸಲಾಗುತ್ತದೆ. ಇದರ ಜೊತೆಗೆ, ಅರಮನೆಯಲ್ಲಿರುವ ಐಷಾರಾಮಿ ಕಾರುಗಳು ಮತ್ತು ಇತರೆ ವಾಹನಗಳಿಗೂ ಪೂಜೆ ಸಲ್ಲಿಸಲಿದ್ದಾರೆ.



































