
ಅಮೆರಿಕಾ : ಅಮೆರಿಕಾದ ನ್ಯೂ ಕ್ಯಾಸಲ್ ನಲ್ಲಿ ಮೈಸೂರಿನ ಉದ್ಯಮಿಯೊಬ್ಬರು ತನ್ನ ಪತ್ನಿ ಮತ್ತು ಹಿರಿಯ ಪುತ್ರನನ್ನು ಗುಂಡಿಕ್ಕಿ ಹತ್ಯೆಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೈಸೂರಿನ ಮೂಲದ ಹರ್ಷ ಕಿಕ್ಕೇರಿ, ತಮ್ಮ ಪತ್ನಿ ಶ್ವೇತಾ ಮತ್ತು ಹಿರಿಯ ಪುತ್ರನಿಗೆ ಗುಂಡಿಕ್ಕಿ ಹತ್ಯೆ ಮಾಡಿ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಾಗುವ ಸಮಯದಲ್ಲಿ, 7 ವರ್ಷದ ಕಿರಿಯ ಪುತ್ರ ಮನೆ ಬಳಿ ಇದ್ದುದರಿಂದ ಜೀವಂತಾವಾಗಿದ್ದಾನೆ ಎಂದು ತಿಳಿದುಬಂದಿದೆ.
ಹರ್ಷ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದವರಾಗಿದ್ದು, ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಅಮೆರಿಕಾದ ಮೈಕ್ರೋಸಾಫ್ಟ್‌ನಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು. ಅಲ್ಲಿ ರೋಬೋಟ್ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
2017ರಲ್ಲಿ ಭಾರತಕ್ಕೆ ಹಿಂದಿರುಗಿದ ಬಳಿಕ, ಅವರು ಮತ್ತು ಅವರ ಪತ್ನಿ ಶ್ವೇತಾ ಮೈಸೂರಿನಲ್ಲಿ ‘ಹೋಲೋವರ್ಲ್ಡ್’ ಎಂಬ ರೊಬೊಟಿಕ್ಸ್ ಸ್ಟಾರ್ಟ್-ಅಪ್ ಸ್ಥಾಪಿಸಿದ್ದರು. 2018ರಲ್ಲಿ, ಈ ಕಂಪನಿ ‘ಹೋಲೋಸೂಟ್’ ಅನ್ನು ಅಭಿವೃದ್ಧಿಪಡಿಸಿತು, ಇದು ವೈರ್‌ಲೆಸ್ ಪೂರ್ಣ-ದೇಹದ ಮೋಷನ್ ಕ್ಯಾಪ್ಚರ್ ಸೂಟ್ ಆಗಿತ್ತು, ಇದರಿಂದ ಕ್ರೀಡೆ, ಆರೋಗ್ಯ ರಕ್ಷಣೆ, ಶಿಕ್ಷಣ, ಮತ್ತು ಕೌಶಲ್ಯ ಅಭಿವೃದ್ಧಿಗೆ ಸಹಾಯವಾಗುತ್ತಿತ್ತು.
ಹರ್ಷ ಮತ್ತು ಶ್ವೇತಾ ಅವರು ಈ ಸಂಸ್ಥೆಯ ಅಧ್ಯಕ್ಷರು ಮತ್ತು ಸಿಇಒ ಆಗಿದ್ದರು, ಮತ್ತು ಅವರು ತಮ್ಮ ಕಂಪನಿಯ ಉತ್ಪನ್ನಗಳನ್ನು ಯುಎಸ್, ಯುಕೆ ಮತ್ತು ಇಸ್ರೇಲ್ ದೇಶಗಳಿಗೆ ರಫ್ತು ಮಾಡುತ್ತಿದ್ದರು.