
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಗಂಭೀರ ಘಟನೆಯೊಂದು ವರದಿಯಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಪ್ರಸಿದ್ಧ ಶ್ರೀನಿವಾಸಸಾಗರ ಜಲಾಶಯದ ಸಮೀಪವಿರುವ ಗಂಗಮ್ಮ ದೇವಿಯ ವಿಗ್ರಹದ ಮೇಲೆ ಅನ್ಯಕೋಮಿನ ಮಹಿಳೆಯರು ಕಾಲಿಟ್ಟು ಸ್ನಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಗಣೇಶ ಮೂರ್ತಿಯ ಮೇಲೆ ಚಪ್ಪಲಿ ಇಟ್ಟು ಅವಮಾನಿಸಿದ ಪ್ರಕರಣದ ಮಾಸುವ ಮುನ್ನವೇ, ಇಂತಹದ್ದೇ ಮತ್ತೊಂದು ವಿವಾದಾತ್ಮಕ ಕೃತ್ಯ ನಡೆದಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಏನಿದು ಘಟನೆ?
ಶ್ರೀನಿವಾಸಸಾಗರ ಜಲಾಶಯದಲ್ಲಿ ಜಲಪಾತದಂತೆ ಧುಮುಕುವ ನೀರಿನಲ್ಲಿ ಪ್ರವಾಸಿಗರು ಸಾಮಾನ್ಯವಾಗಿ ಮೋಜು ಮಸ್ತಿ ಮಾಡುವುದು ವಾಡಿಕೆ. ಸುಮಾರು 3 ದಿನಗಳ ಹಿಂದೆ ಪ್ರವಾಸಕ್ಕೆ ಬಂದಿದ್ದ ಅನ್ಯಕೋಮಿಗೆ ಸೇರಿದ ಕೆಲವು ಯುವತಿಯರು, ನೀರಿನಲ್ಲಿ ಆಟವಾಡುವಾಗ, ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಂಗಮ್ಮ ದೇವಿಯ ವಿಗ್ರಹದ ಮೇಲೆ ಯಾವುದೇ ಹಿಂಜರಿಕೆ ಇಲ್ಲದೆ ಕಾಲಿಟ್ಟು ನಿಂತು ಸ್ನಾನ ಮಾಡಿದ್ದಾರೆ. ಕೆಲವರು ಇದನ್ನು ವಿಡಿಯೋ ಮಾಡಿದ್ದು, ಆ ವಿಡಿಯೋ ಈಗ ಸಾರ್ವಜನಿಕವಾಗಿ ವೈರಲ್ ಆಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ
ದೇವಿಯ ವಿಗ್ರಹವನ್ನು ಪೂಜನೀಯ ಭಾವನೆಯಿಂದ ಕಾಣುವ ಜಾಗದಲ್ಲಿ, ಅದರ ಮೇಲೆ ಕಾಲಿಟ್ಟು ಸ್ನಾನ ಮಾಡಿರುವುದು ಅನೇಕ ಹಿಂದೂಪರ ಸಂಘಟನೆಗಳ ಮತ್ತು ಸ್ಥಳೀಯರ ಆಕ್ರೋಶಕ್ಕೆ ಎಡೆಮಾಡಿದೆ. ಇಂತಹ ಕೃತ್ಯಗಳು ಉದ್ದೇಶಪೂರ್ವಕವೋ ಅಥವಾ ಅರಿವಿಲ್ಲದೆ ನಡೆದ ಆಕಸ್ಮಿಕವೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲವಾದರೂ, ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಇದರಿಂದ ತೀವ್ರ ನೋವುಂಟಾಗಿದೆ ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ. ಈ ಕೃತ್ಯವು ಅಕ್ಷಮ್ಯ ಅಪರಾಧವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನೂ ದೂರು ದಾಖಲಾಗಿಲ್ಲ
ಘಟನೆ ನಡೆದ ಸ್ಥಳವು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ವಿಡಿಯೋ ವೈರಲ್ ಆಗಿ ಗಂಭೀರ ಸ್ವರೂಪ ಪಡೆದಿದ್ದರೂ, ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಹಿಂದೂಪರ ಸಂಘಟನೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ದೂರು ದಾಖಲಿಸುವ ಸಾಧ್ಯತೆ ಇದೆ. ಈ ವಿವಾದಾತ್ಮಕ ವಿಡಿಯೋ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.



































