
ಮುಂಬೈ: ಖ್ಯಾತ ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಅವರು ಚಲಿಸುತ್ತಿರುವ ರೈಲಿನಿಂದ ಇಳಿಯುವ ಸಾಹಸಕ್ಕೆ ಕೈ ಹಾಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಈ ಘಟನೆ ಮುಂಬೈನ ಚರ್ಚ್‌ಗೇಟ್ ರೈಲು ನಿಲ್ದಾಣದ ಬಳಿ ನಡೆದಿದೆ. ಪ್ಯಾರ್ ಕಾ ಪಂಚನಾಮಾ ಮತ್ತು ರಾಗಿಣಿ ಎಂಎಂಎಸ್ ರಿಟರ್ನ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಕರಿಷ್ಮಾ, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಕುರಿತು ಸ್ವತಃ ನಟಿಯೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಚರ್ಚ್‌ಗೇಟ್‌ನಲ್ಲಿ ನಡೆಯಲಿದ್ದ ಶೂಟಿಂಗ್‌ಗೆ ಹೋಗಲು ಕರಿಷ್ಮಾ ಮುಂಬೈ ರೈಲು ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ಅವರು ಸೀರೆ ಧರಿಸಿದ್ದರು. ಲೋಕಲ್ ರೈಲು ಹತ್ತುತ್ತಿರುವಾಗ, ರೈಲು ಚಲಿಸಲು ಆರಂಭಿಸಿತು. ಅವರೊಂದಿಗೆ ಇದ್ದ ಗೆಳತಿಯರು ರೈಲು ಹತ್ತಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದ ಕರಿಷ್ಮಾ, ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು, ತಲೆ, ಬೆನ್ನು ಮತ್ತು ಕೈಗಳಿಗೆ ಗಾಯಗಳಾಗಿವೆ.
ಕೂಡಲೇ ಅವರ ಸ್ನೇಹಿತರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ನಟಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಲೆಗೆ ಗಂಭೀರ ಗಾಯಗಳಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಈ ವರದಿಯನ್ನು ನೋಡಿಕೊಂಡು ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಸಿನಿಮಾ ಮಾತ್ರವಲ್ಲದೆ, ಕರಿಷ್ಮಾ ಶರ್ಮಾ ಅವರು ಪವಿತ್ರ ರಿಶ್ತಾ, ಯೇ ಹೈ ಮೊಹಬ್ಬತೇನ್ ಮತ್ತು ಪ್ಯಾರ್ ತುನೆ ಕ್ಯಾ ಕಿಯಾ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ.