
ಎಂ.ಆರ್.ಪಿ.ಎಲ್. ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಿಗಬೇಕಾದ ವಿಮೆ ಸೌಲಭ್ಯ, ಆರೋಗ್ಯ ಭದ್ರತೆ, ವಿಶೇಷ ಭತ್ಯೆ ಮುಂತಾದ ನೈಜ ಹಕ್ಕುಗಳನ್ನು ಒದಗಿಸುವಂತೆ ಆಗ್ರಹಿಸಿ, ಡಿಸಿ ಕಚೇರಿಯಲ್ಲಿ ಏಪ್ರಿಲ್ 2 ರಂದು ಸಂಸದರ ಉಪಸ್ಥಿತಿಯಲ್ಲಿ ಮಹತ್ವದ ಸಭೆ ನಡೆದಿತ್ತು.
ಅದರಲ್ಲಿ ಅಪರ ಜಿಲ್ಲಾಧಿಕಾರಿ, ಎಂ.ಆರ್.ಪಿ.ಎಲ್. ಸಂಸ್ಥೆಯ ಹಿರಿಯ ಅಧಿಕಾರಿಗಳು, ಕಾರ್ಮಿಕ ಇಲಾಖೆ ಹಾಗೂ ಕರ್ಮಚಾರಿ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಗುತ್ತಿಗೆ ಕಾರ್ಮಿಕರ ಬೇಡಿಕೆಗಳ ಕುರಿತು ಎಂ.ಆರ್.ಪಿ.ಎಲ್. ಸಂಸ್ಥೆ ಲಿಖಿತವಾಗಿ ಸ್ಪಷ್ಟನೆ ನೀಡಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದರು.

ಆದರೆ ಈ ಮೇಲ್ವಿಚಾರಣೆಯಾಗಿರುವ ಆಗ್ರಹಕ್ಕೂ ಇನ್ನೂ ಯಾವುದೇ ಸ್ಪಷ್ಟ ಉತ್ತರ ಸಂಸ್ಥೆಯಿಂದ ಬಂದಿಲ್ಲ. ಈ ಹಿನ್ನೆಲೆ, ಎಲ್ಲಾ ಗುತ್ತಿಗೆ ಕಾರ್ಮಿಕರು ಇಂದು ಮುಂಜಾನೆ ಎಂ.ಆರ್.ಪಿ.ಎಲ್. ಮುಖ್ಯಗೇಟ್‌ನ ಗಣಪತಿ ದೇವಸ್ಥಾನದಿಂದ ಹೊರಟು ಪೆರ್ಮುದೆ ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಭಕ್ತಿಯಿಂದ ಪಾದಯಾತ್ರೆ ನಡೆಸಿದರು.
“ಎಂ.ಆರ್.ಪಿ.ಎಲ್. ಗುತ್ತಿಗೆ ಕಾರ್ಮಿಕರ ಶಕ್ತಿಯ ಪ್ರಾಪ್ತಿಗಾಗಿ” ಎಂಬ ಸಂಕಲ್ಪದೊಂದಿಗೆ ನಡೆದ ಈ ಯಾತ್ರೆಯಲ್ಲಿ, ಕಾರ್ಮಿಕರು ತಾಯಿ ಪಿಲಿಚಾಮುಂಡಿ ದೈವದ ಸನ್ನಿಧಿಯಲ್ಲಿ ನ್ಯಾಯ ಸಿಗಲೆಂದು ಪ್ರಾರ್ಥಿಸಿದರು.

ಈ ಸಂದರ್ಭ ಗುತ್ತಿಗೆ ಕಾರ್ಮಿಕರ ಪ್ರಮುಖರು ಮಾತನಾಡಿ, “ಸಂಸ್ಥೆ ಸೌಲಭ್ಯ ನೀಡಲು ಸಿದ್ಧವಾಗಿದ್ದರೂ, ಕೆಲವರು ಅವಕ್ಕೆ ತಡೆ ನೀಡುತ್ತಿರುವುದು ಗೋಚರಿಸುತ್ತದೆ. ಇಂತಹ ಅಡ್ಡಿಗಳಿಗೆ ತಾಯಿ ಪಿಲಿಚಾಮುಂಡಿ ದೈವ ಕಡಿವಾಣ ಹಾಕಲಿ” ಎಂದು ಆಶಿಸಿದರು.
ದೈವಸ್ಥಾನದ ಗುತ್ತಿನಾರ್ ಗುರುರಾಜ್ ಮಾಡ ಅವರು, “ಎಲ್ಲಾ ಗುತ್ತಿಗೆ ಕಾರ್ಮಿಕರ ಬೇಡಿಕೆಗಳು ಬೇಗನೆ ಈಡೇರಲಿ” ಎಂದು ತಾಯಿ ಪಿಲಿಚಾಮುಂಡಿಗೆ ಪ್ರಾರ್ಥಿಸಿದರು.