
ತುಮಕೂರು: ಕೊರಟಗೆರೆ ರಸ್ತೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಳಿಯನೇ ತನ್ನ ಅತ್ತೆಯನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡಾಗಿ ಬಿಸಾಡಿರುವುದು ಬೆಳಕಿಗೆ ಬಂದಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಕ್ಷೇತ್ರದಲ್ಲಿ ನಡೆದ ಈ ಘಟನೆ ತೀವ್ರ ಸಂಚಲನ ಮೂಡಿಸಿತ್ತು.
ಪೊಲೀಸರು ಶವದ ಜಾಡು ಹಿಡಿದು ತನಿಖೆ ನಡೆಸಿದಾಗ, ಕೊಲೆಯಾದ ಮಹಿಳೆ ಲಕ್ಷ್ಮೀದೇವಮ್ಮ ಎಂಬುವವರ ಅಳಿಯ ಡಾ. ರಾಮಚಂದ್ರನೇ ಈ ಕೃತ್ಯದ ರೂವಾರಿ ಎಂಬುದು ಬಯಲಾಗಿದೆ. ವೃತ್ತಿಯಲ್ಲಿ ದಂತವೈದ್ಯನಾಗಿರುವ ರಾಮಚಂದ್ರ, ತನ್ನ ಸ್ನೇಹಿತರಾದ ಸತೀಶ್ ಮತ್ತು ಕಿರಣ್ ಎಂಬುವವರ ಸಹಾಯದಿಂದ ಈ ಹತ್ಯೆ ಮಾಡಿದ್ದಾನೆ.
ಕೋಳಾಲದಲ್ಲಿರುವ ಸತೀಶ್‌ನ ಫಾರ್ಮ್ ಹೌಸ್‌ನಲ್ಲಿ ಕೊಲೆ ನಡೆಸಿ, ಬಳಿಕ ದೇಹದ ಭಾಗಗಳನ್ನು ತುಂಡು ಮಾಡಿ ರಸ್ತೆಯಲ್ಲಿ ಎಸೆದಿದ್ದಾರೆ. ಕೊಲೆ ನಡೆದ ನಂತರ ಆರೋಪಿಗಳು ತಮ್ಮ ಮೇಲಿನ ಅನುಮಾನ ತಪ್ಪಿಸಿಕೊಳ್ಳಲು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು. ಆದರೆ, ಅತ್ತೆಯ ಕೊಲೆಯಾದ ನಂತರ ಅಳಿಯ ಸ್ಥಳದಲ್ಲಿ ಇಲ್ಲದಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ತನಿಖೆ ತೀವ್ರಗೊಂಡಾಗ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.