
ದೆಹಲಿ : ದೆಹಲಿಯ ಲಜಪತ್ ನಗರದಲ್ಲಿ ತಾಯಿ ಮತ್ತು ಮಗನನ್ನು ಬರ್ಬರವಾಗಿ ಗಂಟಲು ಸೀಳಿ ಹತ್ಯೆ ಮಾಡಿದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. 42 ವರ್ಷದ ರುಚಿಕಾ ಸೇವಾನಿ ಹಾಗೂ ಆಕೆಯ 10 ವರ್ಷದ ಮಗ ಕ್ರಿಶ್ ಮೃತಪಟ್ಟ ದುರ್ದೈವಿಗಳು. ಇವರನ್ನು ಹತ್ಯೆಗೈದ ವ್ಯಕ್ತಿ ಮನೆ ಕೆಲಸದವನಾಗಿದ್ದ ಮುಖೇಶ್ ಎನ್ನಲಾಗಿದೆ.
ಮೃತರು ಲಜಪತ್ ನಗರ ಮಾರುಕಟ್ಟೆಯಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದ ಕುಲದೀಪ್ ಸೇವಾನಿ ಅವರ ಪತ್ನಿ ಮತ್ತು ಪುತ್ರ. ಬುಧವಾರ ರಾತ್ರಿ ಸುಮಾರು 9.30ರ ಸುಮಾರಿಗೆ ಕುಲದೀಪ್ ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಬಾಗಿಲು ಲಾಕ್ ಆಗಿತ್ತು. ಪತ್ನಿ ಮತ್ತು ಮಗನಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಗೇಟ್ ಹಾಗೂ ಮೆಟ್ಟಿಲುಗಳ ಬಳಿ ರಕ್ತದ ಕಲೆಗಳು ಕಂಡುಬಂದುದರಿಂದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಭಯಾನಕ ದೃಶ್ಯ ಎದುರಾಯಿತು. ರುಚಿಕಾ ಅವರು ಹಾಸಿಗೆಯ ಪಕ್ಕದ ನೆಲದಲ್ಲಿ ಶವವಾಗಿ ಮಲಗಿದ್ದು, ಶರ್ಟ್ ರಕ್ತದಿಂದ ತೊಯ್ದು ಹೋಗಿತ್ತು. ತಲೆಯ ಸುತ್ತಲೂ ರಕ್ತ ಮಡುಗಟ್ಟಿತ್ತು. ಮಗ ಕ್ರಿಶ್ ಬಾತ್‌ರೂಮ್‌ನ ನೆಲದ ಮೇಲೆ ಶವವಾಗಿ ಬಿದ್ದಿದ್ದ, ಸುತ್ತಲೂ ರಕ್ತವಿತ್ತು.
ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದು, ಕುಲದೀಪ್ ಸೇವಾನಿ ಅವರ ಅಂಗಡಿಯಲ್ಲಿ ಸಹಾಯಕನಾಗಿ ಮತ್ತು ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುಖೇಶ್ ಎಂಬಾತನನ್ನು ಘಟನೆ ಬಳಿಕ ನಗರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ರುಚಿಕಾ ಮತ್ತು ಆಕೆಯ ಮಗನಿಂದ ಅವಮಾನಿತರಾಗಿದ್ದ ಕಾರಣ ಕೋಪದಲ್ಲಿ ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿಯು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಹತ್ಯೆಯ ನಿಖರ ಕಾರಣ ಹಾಗೂ ಘಟನೆ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.