
ಮೂಡುಬಿದಿರೆ: ಮೂಡುಬಿದಿರೆಯ ಅಳಿಯೂರಿನ ಖ್ಯಾತ ಪಾಕ ತಜ್ಞ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಹಗಲು ಹೊತ್ತಿನಲ್ಲೇ ದರೋಡೆ ನಡೆದಿದ್ದು, ಕಳ್ಳರು ಮೂರೂವರೆ ಲಕ್ಷ ರೂಪಾಯಿ ನಗದು ಹಾಗೂ 20 ಪವನ್ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಘಟನೆ ನಿನ್ನೆ ಬೆಳಿಗ್ಗೆ 10:30ರ ಸುಮಾರಿಗೆ ನಡೆದಿದ್ದು, ಆಗ ಮನೆಯಲ್ಲಿ ಪ್ರಶಾಂತ್ ಜೈನ್ ಅವರ ಮಗಳ ಹೊರತು ಬೇರಾರೂ ಇರಲಿಲ್ಲ. ಪ್ರಶಾಂತ್ ಮತ್ತು ಅವರ ಮಗ ಅಡುಗೆ ಕೆಲಸಕ್ಕಾಗಿ ಮುಲ್ಕಿಗೆ ತೆರಳಿದ್ದರೆ, ಅವರ ಪತ್ನಿ ಶಿರ್ತಾಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಹೋಗಿದ್ದರು.
ಈ ಸಂದರ್ಭದಲ್ಲಿ ಕಳ್ಳರು ಮನೆಯೊಳಗೆ ನುಗ್ಗಿದ್ದು, ಕಪಾಟು ತೆರೆಯುವ ಸದ್ದು ಕೇಳಿದ ಕಾರಣ ಯುವತಿ ನೋಡಲು ಬಂದಾಗ, ಕಳ್ಳರು ಬೊಬ್ಬೆ ಹೊಡೆಯದಂತೆ ಆಕೆಯ ಬಾಯಿಗೆ ಒತ್ತಿ ಹಿಡಿದಿದ್ದಾರೆ. ಬಳಿಕ ಆಕೆಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿದ ಬಳಿಕ ನಗದು ಮತ್ತು ಚಿನ್ನವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಮಧ್ಯಾಹ್ನ 12:30ರ ಸುಮಾರಿಗೆ ಬಂದು ಯುವತಿಯನ್ನು ಎಚ್ಚರಗೊಳಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್ ಮತ್ತು ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಪ್ರಾಯೋಗಿಕ ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ಕಳ್ಳತನದಲ್ಲಿ ಸ್ಥಳೀಯ ವ್ಯಕ್ತಿಗಳ ಕೈವಾಡ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.