
ಮೂಡಬಿದಿರೆ ತಾಲೂಕಿನ ತೋಡಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಸಿದ್ಧಕಟ್ಟೆ ನಿವಾಸಿಯಾದ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮೋಹನ್ ಗೌಡ (45) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಹಸವಾರ ನಾರಾಯಣ ಗೌಡ ಸಣ್ಣಪುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೋಹನ್ ಗೌಡ ಮತ್ತು ನಾರಾಯಣ ಗೌಡ ಮೂಡಬಿದಿರೆಯ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ, ಮಿಜಾರು ಧೂಮಚಡವಿನಲ್ಲಿ ನಡೆಯುತ್ತಿದ್ದ ಮತ್ತೊಂದು ಮದುವೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಪಾಲಡ್ಕ ನಿವಾಸಿ ಹಾಗೂ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಏರನ್ ಮಥಾಯಸ್ ಚಲಾಯಿಸುತ್ತಿದ್ದ ವ್ಯಾಗನ್ ಆರ್ ಕಾರು ರಸ್ತೆಯ ಬಲಭಾಗಕ್ಕೆ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿರುವುದು ವರದಿಯಾಗಿದೆ. ಗಂಭೀರ ಗಾಯಗೊಂಡ ಮೋಹನ್ ಗೌಡ ಅವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.
ಮೂಡಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.