
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆತಂಕಕಾರಿಯಾಗಿ ಮುಂದುವರಿದಿದ್ದು, ಮಳೆಯುಂಟುಮಾಡಿದ ಅಪಘಾತಗಳು ಕಳೆದ ಮಂಗಳವಾರ ಒಂದೇ ದಿನ ಎಂಟು ಜೀವಗಳನ್ನು ಬಲಿ ಪಡೆದಿವೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನಾಗನೂರ ಪಿಎ ಗ್ರಾಮದಲ್ಲಿ 9 ವರ್ಷದ ಗಣೇಶ್ ಕಾಂಬಳೆ ಹಾಗೂ 11 ವರ್ಷದ ದೀಪಕ್ ಕಾಂಬಳೆ ಎಂಬ ಇಬ್ಬರು ಬಾಲಕರು ಎತ್ತಿನಗಾಡಿಯಲ್ಲಿ ಪ್ರಯಾಣಿಸುತ್ತಿದ್ದರು. ಹಳ್ಳ ತುಂಬಿ ಹರಿಯುತ್ತಿದ್ದ ಹಿನ್ನೆಲೆ, ದಾರಿಯು ಕಾಣದಂತೆ ಎತ್ತಿನಗಾಡಿ ಹಳ್ಳಕ್ಕೆ ಮಗುಚಿಬಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಒಂದು ಎತ್ತು ಸಹ ಸಾವಿಗೀಡಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕಿರವಾಡಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಶಾಂತಮ್ಮ ತಳವಾರ ಎಂಬವರು ಮೃತಪಟ್ಟಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಬಳಿ ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಜಮೀನಿನಲ್ಲಿ ಕೆಲಸಮಾಡುತ್ತಿದ್ದ ಬಾಬುಲಾಲ್ ಬ್ಯಾಡಗಿ ಎಂಬ ರೈತ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದಾರೆ. ಇದೇ ತಾಲ್ಲೂಕಿನ ಕೂಡಲ ಗ್ರಾಮದಲ್ಲಿ ಶಶಾಂಕಗೌಡ ಮುದ್ದಿನಗೌಡ ಎಂಬ ಬಾಲಕ ಪಂಪ್‌ಸೆಟ್ ಮೋಟರ್ ಆನ್ ಮಾಡಲು ಹೋದ ವೇಳೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾನೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಗಳಾಪುರ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ ರಿಪೇರಿಯ ವೇಳೆ ರಂಗಪ್ಪ ಎಂಬವರು ವಿದ್ಯುತ್ ಶಾಕ್‌ಗೆ ಬಲಿಯಾಗಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರ ಗ್ರಾಮದಲ್ಲಿ ಮನೆ ಬಳಿ ಕೆಲಸ ಮಾಡುತ್ತಿದ್ದಾಗ ಮರದ ಕೊಂಬೆ ಬಿದ್ದು ವಿಷ್ಟು ಬೆಳ್ಯಪ್ಪ ಎಂಬವರು ಮೃತಪಟ್ಟಿದ್ದಾರೆ.
ಇನ್ನೊಂದು ದುರ್ಘಟನೆ ಕಾವೇರಿ ನದಿಯಲ್ಲಿ ನಡೆದಿದ್ದು, ಈಜಲು ಇಳಿದ ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಅವನು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಹಲವೆಡೆ ನದಿಗಳ ಪ್ರವಾಹವೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ತಿಳಿಸಿದ್ದರೂ, ಅವಾಂತರಗಳು ಮುಂದುವರೆದಿವೆ.