
ಉಡುಪಿ: ಇತ್ತೀಚೆಗೆ ದುಬೈಗೆ ಪ್ರಯಾಣಿಸಿದ ಉಡುಪಿಯ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದಾಗಿ ದೃಢಪಟ್ಟಿದ್ದು, ಅವರು ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಖಚಿತಪಡಿಸಿದ್ದಾರೆ.
ವ್ಯಕ್ತಿಯ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಆರೋಗ್ಯ ಇಲಾಖೆಯು ವರದಿಯ ನಿರೀಕ್ಷೆಯಲ್ಲಿದೆ. ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಡಾ. ವಿದ್ಯಾ ಕುಮಾರಿ, ರೋಗಿಯ ಸಂಬಂಧಿಕರು ಅಥವಾ ನಿಕಟ ಸಂಪರ್ಕದಲ್ಲಿರುವ ಯಾರಿಗೂ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿಸಿದರು.
ವಿದೇಶದಿಂದ ಬಂದ ಬಳಿಕ ರೋಗಿಯು ನೇರವಾಗಿ ಆಸ್ಪತ್ರೆಗೆ ಹೋಗಿದ್ದು, ಇತರರೊಂದಿಗೆ ಯಾವುದೇ ಸಂವಹನ ನಡೆಸಿಲ್ಲ. ರೋಗಿಯನ್ನು ತಕ್ಷಣ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗಿದ್ದು, ನಿಕಟ ಸಂಪರ್ಕದಲ್ಲಿದ್ದ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗಿದೆ. ಅವರಲ್ಲಿ ಯಾರಿಗೂ ರೋಗದ ಲಕ್ಷಣಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.
ಮಂಗನ ಕಾಯಿಲೆ ಪ್ರಕರಣವನ್ನು ದೃಢಪಡಿಸಿದರೂ, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ. ವಿದ್ಯಾ ಕುಮಾರಿ ಭರವಸೆ ನೀಡಿದ್ದಾರೆ.