
ಬಾಗಲಕೋಟೆ (ಮೇ 23):ಮನುಷ್ಯರಿಗೆ ನೋವಿದ್ದರೆ ಆಸ್ಪತ್ರೆ ಹೋಗುವುದು ಸಹಜ. ಆದರೆ, ಈಗ ಒಂದು ಮಂಗ ತಾನು ಗಾಯಗೊಂಡಿರುವುದನ್ನು ನೇರವಾಗಿ ಪಶು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದಿರುವ ಘಟನೆ ಜನರಲ್ಲಿ ಅಚ್ಚರಿ ಮೂಡಿಸಿದೆ.
ಈ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲ್ಲೂಕಿನ ಗಡೂರು ಗ್ರಾಮದಲ್ಲಿ ನಡೆದಿದ್ದು, ಮನುಷ್ಯರಷ್ಟೇ ಪ್ರಾಣಿಗಳಿಗೂ ಬುದ್ಧಿವಂತಿಕೆ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸ್ಥಳೀಯ ಪಶು ಆಸ್ಪತ್ರೆಯ ಬಳಿ ಒಂದು ಮಂಗ ಬಂದು ಬೈಕ್ ಮೇಲಿದ್ದ ಪೆಟ್ಟಿಗೆ ಮೇಲೆ ಕುಳಿತುಕೊಂಡು ತನ್ನ ಕೈಗಳಿಂದ ಸಂಕೇತಗಳನ್ನು ತೋರಿಸಲು ಆರಂಭಿಸಿತು. ನೋವು ಅನುಭವಿಸುತ್ತಿದ್ದ ಮಂಗ, ತನ್ನ ಗುದದ್ವಾರದ ಕಡೆ ಕೈ ತೋರಿಸಿ ತನಗೆ ಸಮಸ್ಯೆಯಿರುವ ಪ್ರದೇಶವನ್ನು ಸೂಚಿಸಿತು. ಈ ದೃಶ್ಯ ಗಮನಿಸಿದ ಸಿಬ್ಬಂದಿ ತಕ್ಷಣ ಪಶು ವೈದ್ಯರನ್ನು ಕರೆಸಿದರು.
ಪಶು ವೈದ್ಯಕೀಯ ಪರಿವೀಕ್ಷಕ ಡಾ. ಜಿ.ಜಿ. ಬಿಲ್ಲೋರ್ ಅವರು ಸ್ಥಳಕ್ಕೆ ಧಾವಿಸಿ ಮಂಗನನ್ನು ಪರಿಶೀಲಿಸಿದರು. ಮಂಗ ತೋರಿಸಿದಂತೆ ಅದರ ಗುದದ್ವಾರದ ಬಳಿ ಗಾಯವಿದ್ದು, ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ ನಂತರ, ಮಂಗ ನೆಮ್ಮದಿಯಿಂದ ಅಲ್ಲಿಂದ ಹೊರಟುಹೋಯಿತು.
ಈ ಘಟನೆಯು ಗ್ರಾಮಸ್ಥರಲ್ಲಿ ಆಶ್ಚರ್ಯ ಹಾಗೂ ಸಂತೋಷ ಮೂಡಿಸಿದ್ದು, ಮಂಗನ ಬುದ್ಧಿವಂತಿಕೆಯ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.