
ಕಾರ್ಕಳ : ಕಾರ್ಕಳದ ಕುಂಟಲ್ಪಾಡಿಯಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಬಸ್ ಚಾಲಕನನ್ನು ಬಂಧಿಸಲಾಗಿದೆ. ಮೃತರನ್ನು ಮಂಗಳೂರು ಮೂಲದ ಬಡ್ಡಿ ವ್ಯಾಪಾರಿ ನವೀನ್ ಪೂಜಾರಿ ಎಂದು ಗುರುತಿಸಲಾಗಿದೆ.
ಈ ಕೊಲೆಗೆ ಸಂಬಂಧಿಸಿ ಬೆಳ್ತಂಗಡಿ ತಾಲೂಕಿನ ನಾಡ ನಿವಾಸಿ ಪರೀಕ್ಷಿತ್(44) ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ನಸುಕಿನ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನವೀನ್ ಪೂಜಾರಿಯವರ ಮೃತದೇಹ ಪತ್ತೆಯಾಗಿದ್ದು, ಚೂರಿ ಇರಿತದಿಂದ ಗಾಯಗೊಂಡು ಸಾವನ್ನಪ್ಪಿರುವುದು ದೃಢಪಟ್ಟಿದೆ.
ಪೊಲೀಸರ ತನಿಖೆಯಿಂದ ಕೊಲೆಯ ಹಿಂದಿನ ಕಾರಣ ಬಯಲಾಗಿದೆ. ಪರೀಕ್ಷಿತ್‌ಗೆ ಪರಿಚಯವಿದ್ದ ಮಹಿಳೆಯೊಬ್ಬರ ಜೊತೆ ನವೀನ್ ಪೂಜಾರಿ ಆತ್ಮೀಯತೆ ಬೆಳೆಸಿಕೊಂಡಿದ್ದರು. ಇದು ಪರೀಕ್ಷಿತ್‌ಗೆ ಇಷ್ಟವಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಇದೇ ಕಾರಣಕ್ಕೆ ನವೀನ್ ಪೂಜಾರಿಯನ್ನು ಪರೀಕ್ಷಿತ್ ಕೊಲೆ ಮಾಡಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆರೋಪಿ ಪರೀಕ್ಷಿತ್ ಮಂಗಳೂರಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇಬ್ಬರೂ ತಮ್ಮ ಪತ್ನಿ ಮತ್ತು ಮಕ್ಕಳಿಂದ ದೂರವಾಗಿ ವಾಸವಾಗಿದ್ದರು. ಸಿಸಿಟಿವಿ ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.