
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷ ಪೂರೈಸಿದ ಬಳಿಕ ಅಧಿಕಾರದಿಂದ ಕೆಳಗಿಳಿದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಧಾನಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿ, “75 ವರ್ಷ ತುಂಬಿದ ನಂತರ ನಿವೃತ್ತಿ ಪಡೆಯುವುದು ಮತ್ತು ಇತರರಿಗೆ ದಾರಿ ಮಾಡಿಕೊಡುವುದು ಸೂಕ್ತ” ಎಂದು ಅವರು ಹೇಳಿದರು.
ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು 75 ವರ್ಷ ತುಂಬಿದ ನಂತರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಉದಾಹರಣೆಯನ್ನು ನೀಡಿದ ಗೋಪಾಲಕೃಷ್ಣ, ಇದೇ ಮಾನದಂಡವನ್ನು ಪ್ರಧಾನಿ ಮೋದಿ ಅವರಿಗೂ ಅನ್ವಯಿಸಬೇಕು ಎಂದು ಆಗ್ರಹಿಸಿದರು. “ಯಡಿಯೂರಪ್ಪ ಅವರನ್ನು ಬಿಜೆಪಿ ಪಾಪಿಗಳು ಕಣ್ಣೀರು ಹಾಕಿಸುತ್ತಾ ರಾಜೀನಾಮೆ ನೀಡುವಂತೆ ಮಾಡಿದರು. ಮೋದಿ ಜಿ ಅವರನ್ನು ಏಕೆ ಭಿನ್ನವಾಗಿ ನಡೆಸಿಕೊಳ್ಳಬೇಕು? ಮೋದಿ ಸೂಚನೆಯ ಮೇರೆಗೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಯಿತು ಅಲ್ಲವೇ?” ಎಂದು ಪ್ರಶ್ನಿಸಿದರು.
ನಾಗ್ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೋಹನ್ ಭಾಗವತ್, ದಿವಂಗತ ಮೊರೋಪಂತ್ ಪಿಂಗ್ಲೆ ಅವರ ಸಿದ್ಧಾಂತವನ್ನು ನೆನಪಿಸಿಕೊಂಡು, 75 ವರ್ಷ ವಯಸ್ಸು ನಿವೃತ್ತಿ ಪಡೆಯುವ ಸಮಯ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಸ್ವಾಗತಿಸಿದ ಬೇಳೂರು ಗೋಪಾಲಕೃಷ್ಣ, “ಪ್ರಧಾನಿ ಮೋದಿ ಅಧಿಕಾರದಿಂದ ಕೆಳಗಿಳಿದರೆ, ನಿತಿನ್ ಗಡ್ಕರಿ ದೇಶದ ಮುಂದಿನ ಪ್ರಧಾನಿಯಾಗಬೇಕು. ಏಕೆಂದರೆ ಗಡ್ಕರಿ ಅವರಿಗೆ ದೇಶದ ಸಾಮಾನ್ಯ ಜನರ ಬಗ್ಗೆ ಕಾಳಜಿ ಇದೆ” ಎಂದು ಪ್ರತಿಪಾದಿಸಿದರು.
ಇತ್ತೀಚೆಗೆ ನಿತಿನ್ ಗಡ್ಕರಿ ಅವರು “ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಮತ್ತು ದೇಶದ ಸಂಪತ್ತು ಕೆಲವೇ ಜನರ ಪಾಲಾಗುತ್ತಿದೆ” ಎಂದು ಹೇಳಿದ್ದನ್ನು ಬೇಳೂರು ಗೋಪಾಲಕೃಷ್ಣ ಉಲ್ಲೇಖಿಸಿದರು. ಇದು ಗಡ್ಕರಿ ಅವರ ದೂರದೃಷ್ಟಿ ಮತ್ತು ಸಾಮಾನ್ಯ ಜನರ ಬಗೆಗಿನ ಕಾಳಜಿಗೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು. “ಗಡ್ಕರಿ ಅವರ ಸೇವೆ ಮತ್ತು ವ್ಯಕ್ತಿತ್ವ ದೇಶದ ಜನರಿಗೆ ತಿಳಿದಿದೆ. ಅವರಿಗೆ ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇದೆ ಮತ್ತು ಅಂತಹ ವ್ಯಕ್ತಿಗಳು ಪ್ರಧಾನಿ ಆಗಬೇಕು” ಎಂದು ಹೇಳಿದರು. 75 ವರ್ಷದ ನಂತರ ಅಧಿಕಾರದಲ್ಲಿ ಮುಂದುವರಿಯಬಾರದು ಎಂಬ ಭಾಗವತ್ ಅವರ ಸಲಹೆಯನ್ನು ಅನುಸರಿಸಿದರೆ, ಗಡ್ಕರಿ ಅವರಿಗೆ ಪ್ರಧಾನಿ ಪಟ್ಟಕ್ಕೆ ಇದು ಸರಿಯಾದ ಸಮಯ ಎಂದು ಅವರು ತಿಳಿಸಿದರು.