
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಕ್ಷಿಣ ಭಾರತದ ಸುಗ್ಗಿ ಹಬ್ಬ ‘ಪೊಂಗಲ್’ ಸಂಭ್ರಮ ಮನೆಮಾಡಿತ್ತು. ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ಬುಧವಾರ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಹಬ್ಬದ ಮೆರುಗನ್ನು ಹೆಚ್ಚಿಸಿದರು. ತಮಿಳು ಸಂಪ್ರದಾಯದಂತೆ ಅಲಂಕರಿಸಲ್ಪಟ್ಟಿದ್ದ ಸಚಿವರ ನಿವಾಸಕ್ಕೆ ಆಗಮಿಸಿದ ಪ್ರಧಾನಿಯವರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವಿಶೇಷವೆಂದರೆ, ಪ್ರಧಾನಿಯವರು ಸ್ವತಃ ಪೊಂಗಲ್ ಪ್ರಸಾದ ತಯಾರಿಕೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದರು.
ಸುಸ್ಥಿರ ಕೃಷಿ ಹಾಗೂ ಪರಿಸರ ಸಂರಕ್ಷಣೆಗೆ ಕರೆ ಸಮಾರಂಭದಲ್ಲಿ ನೆರೆದಿದ್ದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಪೊಂಗಲ್ ಕೇವಲ ಒಂದು ಹಬ್ಬವಲ್ಲ, ಅದು ಪ್ರಕೃತಿಯ ಬಗ್ಗೆ ನಮಗಿರುವ ಕೃತಜ್ಞತೆಯ ಸಂಕೇತ. ಭೂಮಿತಾಯಿ ನಮಗೆ ನೀಡಿದ ಸಂಪನ್ಮೂಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಹೊಣೆಗಾರಿಕೆಯಾಗಿದೆ” ಎಂದು ಮಾರ್ಮಿಕವಾಗಿ ನುಡಿದರು. ಮಣ್ಣಿನ ಆರೋಗ್ಯ ಕಾಪಾಡುವುದು, ನೀರಿನ ಮಿತಬಳಕೆ ಮತ್ತು ನೈಸರ್ಗಿಕ ಕೃಷಿ ಪದ್ಧತಿಗೆ ಒತ್ತು ನೀಡುವ ಕುರಿತು ಅವರು ಸುದೀರ್ಘವಾಗಿ ಮಾತನಾಡಿದರು. ಕೇಂದ್ರ ಸರ್ಕಾರದ ‘ಮಿಷನ್ ಲೈಫ್’ ಹಾಗೂ ‘ಅಮೃತ್ ಸರೋವರ್’ ಯೋಜನೆಗಳು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ಸ್ಮರಿಸಿದರು.
ತಮಿಳು ಯುವಕರ ಸಾಧನೆಗೆ ಪ್ರಶಂಸೆ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಕೃಷಿ ಸಮ್ಮೇಳನದ ಅನುಭವಗಳನ್ನು ಹಂಚಿಕೊಂಡ ಮೋದಿ, “ಇಂದು ತಮಿಳುನಾಡಿನ ಯುವಕರು ಕೈತುಂಬಾ ಸಂಬಳ ಬರುವ ಕೆಲಸಗಳನ್ನು ಬಿಟ್ಟು ನೈಸರ್ಗಿಕ ಕೃಷಿಯತ್ತ ಮುಖ ಮಾಡುತ್ತಿರುವುದು ಹೆಮ್ಮೆಯ ವಿಷಯ. ಆಧುನಿಕ ತಂತ್ರಜ್ಞಾನ ಹಾಗೂ ಪಾರಂಪರಿಕ ಕೃಷಿಯನ್ನು ಬೆಸೆಯುತ್ತಿರುವ ಯುವ ಮಿತ್ರರ ಪ್ರಯತ್ನಗಳು ದೇಶದ ಕೃಷಿ ವಲಯದಲ್ಲಿ ದೊಡ್ಡ ಕ್ರಾಂತಿ ತರಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಏಕತೆಯ ಪ್ರತಿಬಿಂಬ ತಮಿಳು ಸಂಸ್ಕೃತಿಯು ಇಡೀ ವಿಶ್ವದ ಅಮೂಲ್ಯ ಪರಂಪರೆಯಾಗಿದೆ ಎಂದ ಪ್ರಧಾನಿ, ವಾರಾಣಸಿಯ ಕಾಶಿ ತಮಿಳು ಸಂಗಮ ಮತ್ತು ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ನೀಡಿದ ಭೇಟಿಯ ನೆನಪುಗಳನ್ನು ಮೆಲುಕು ಹಾಕಿದರು. “ಏಕ್ ಭಾರತ್ ಶ್ರೇಷ್ಠ ಭಾರತ್” ಪರಿಕಲ್ಪನೆಯನ್ನು ಬಲಪಡಿಸುವಲ್ಲಿ ಇಂತಹ ಹಬ್ಬಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪೊಂಗುಲೇಟಿ ಸುಧಾಕರ್ ರೆಡ್ಡಿ ಸೇರಿದಂತೆ ಅನೇಕ ಕೇಂದ್ರ ಸಚಿವರು ಹಾಗೂ ತಮಿಳುನಾಡಿನ ಗಣ್ಯರು ಉಪಸ್ಥಿತರಿದ್ದರು.













