
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಅವರು ಗುರುವಾರ ಎಕ್ಸ್ ಪೋಸ್ಟ್ ಮಾಡುತ್ತಾ, “ಮೋದಿ ಜಿ ಗಂಗಾ ಮಾತೆ ಎಂದು ಕರೆದರು, ಆದರೆ ಗಂಗಾ ಶುದ್ಧೀಕರಣದ ಭರವಸೆಯನ್ನು ಮರೆತಿದ್ದಾರೆ!” ಎಂದು ವಾಗ್ದಾಳಿ ನಡೆಸಿದರು.
2014ರಲ್ಲಿ ಆರಂಭವಾದ ನಮಾಮಿ ಗಂಗೆ ಯೋಜನೆ ಅಡಿಯಲ್ಲಿ 2026ರೊಳಗೆ 42,500 ಕೋಟಿ ರೂ. ವೆಚ್ಚ ಮಾಡಬೇಕಾಗಿತ್ತು. ಆದರೆ 2024 ಡಿಸೆಂಬರ್ ವರೆಗೆ ಕೇವಲ 19,271 ಕೋಟಿ ರೂ. ಮಾತ್ರ ಖರ್ಚಾಗಿದ್ದು, ಶೇಕಡಾ 55% ನಿಧಿ ಇನ್ನೂ ಬಳಕೆಯಾಗಿಲ್ಲ ಎಂದು ಸಂಸತ್ತಿನಲ್ಲಿ ಮಾಹಿತಿ ನೀಡಲಾಗಿದೆ. ಇದನ್ನು ಉಲ್ಲೇಖಿಸಿದ ಖರ್ಗೆ, “ಮಾ ಗಂಗೆಯ ಬಗ್ಗೆ ಇಷ್ಟೊಂದು ಅಸಡ್ಡೆ ಏಕೆ?” ಎಂದು ಪ್ರಧಾನಿ ನರೇಂದ್ರ ಮೋದಿಯನ್ನೇ ಪ್ರಶ್ನಿಸಿದ್ದಾರೆ.
ಇದೇ ವೇಳೆ, ಪ್ರಧಾನಿ ಮೋದಿ ಗುರುವಾರ ಬೆಳಗ್ಗೆ ಉತ್ತರಾಖಂಡದ ಉತ್ತರಕಾಶಿಯ ಮುಖ್ಯಾ ದೇವಸ್ಥಾನದಲ್ಲಿ ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಗಂಗೋತ್ರಿ ಧಾಮದಿಂದ ಚಳಿಗಾಲದ ವೇಳೆಗೆ ವಿಗ್ರಹವನ್ನು ಸ್ಥಳಾಂತರಿಸುವ ಮುಖ್ಯಾ ಗಂಗಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, “ಗಂಗಾ ಮಾತೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ. ಆ ಆಶೀರ್ವಾದವೇ ನನ್ನನ್ನು ಕಾಶಿಗೆ ಕರೆದೊಯ್ದು ಜನರ ಸೇವೆ ಮಾಡಲು ಅವಕಾಶ ನೀಡಿತು” ಎಂದು ಭಾವುಕರಾಗಿ ಪ್ರತಿಕ್ರಿಯಿಸಿದರು.
ಮೋದಿಯ ಈ ಹೇಳಿಕೆ ಮತ್ತು ಖರ್ಗೆಯ ಟೀಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.