
ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಯವಕಪಾಡಿ, ಕಕ್ಕಬೆ, ಕುಂಜಿಲ, ನಾಲಡಿ, ಚೆಯ್ಯಂಡಾಣೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಾಗಿದ್ದು, ಫೆಬ್ರವರಿ 21ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಕಾಫಿ ಕೊಯ್ಲು ಕೊನೆ ಹಂತದಲ್ಲಿದ್ದು, ಕೆಲವರು ಕೊಯ್ಲು ಮುಗಿಸಿ ತೋಟಗಳಿಗೆ ಕೃತಕವಾಗಿ ನೀರು ಸಿಂಪಡಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಳೆಯಾದರೆ ಕಾಫಿ ಹೂವು ಅರಳಲು ಅನುಕೂಲವಾಗುತ್ತದೆ. ಇದರಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ.