
ಚಿತ್ರದುರ್ಗ: ತಿಂಗಳಿಗೆ ಲಕ್ಷ ಲಕ್ಷ ದುಡಿಯುವ ಕನಸು ಕಾಣುತ್ತಿರುವ ನಿರುದ್ಯೋಗಿಗಳಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಹೌದು, ನೀವು ನಿರುದ್ಯೋಗಿಗಳಾಗಿದ್ದು, ಕೈ ತುಂಬಾ ಸಂಬಳ ಪಡೆಯಬೇಕು ಅನ್ಕೊಂಡಿದ್ರೆ ಇದೊಂದು ನಿಮಗೆ ಉತ್ತಮ ಅವಕಾಶವಾಗಿದೆ.
2024-2025ನೇ ಸಾಲಿನಲ್ಲಿ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಹಾಗೂ ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ನಡೆಸಲು ರೂ.5 ಲಕ್ಷ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.
ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. ನೀವೇನಾದ್ರೂ ಆಸಕ್ತರಾಗಿದ್ರೆ ಅರ್ಜಿ ಸಲ್ಲಿಸಬಹು ದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸಂಪೂರ್ಣವಾಗಿ ಈ ಲೇಖನವನ್ನು ಓದಿ. ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಿತ್ವವೇ ಆಧುನಿಕ ಆರ್ಥಿಕತೆಯ ಸ್ತಂಭಗಳಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ವಿಶೇಷ ಯೋಜನೆಗಳನ್ನು ಕೈಗೊಳ್ಳುತ್ತಿದೆ.
ಪ್ರವಾಸೋದ್ಯಮ ಇಲಾಖೆಯ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಗಳಡಿ, ಮೊಬೈಲ್ ಕ್ಯಾಂಟೀನ್ ಸಹಾಯಧನ ಒದಗಿಸುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಹೊಸ ದಿಕ್ಕು ತೋರಿಸಲಾಗುತ್ತಿದೆ. ಉದ್ಯಮಶೀಲತೆ ಕುರಿತು 1 ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಘಟಕ ವೆಚ್ಚದ ಶೇ. 70ರಷ್ಟು ಅಥವಾ ಗರಿಷ್ಠ 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಜನವರಿ.31 ಅರ್ಜಿ ಸಲ್ಲಿಸಲು ಕೊನೆಯ ದಿನ:
ತರಬೇತಿ ಹಾಗೂ ಸಹಾಯಧನಕ್ಕಾಗಿ ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಜಾತಿಯ-06 ಮತ್ತು ಪರಿಶಿಷ್ಟ ಪಂಗಡದ-05 ಅಭ್ಯರ್ಥಿಗಳು ಸೇರಿ ಒಟ್ಟು 11 ಅಭ್ಯರ್ಥಿಗಳ ಗುರಿಯನ್ನು ಪ್ರಸ್ತುತ ಸಾಲಿನಲ್ಲಿ ನಿಗದಿಪಡಿಸಲಾಗಿದೆ. ಈ ತರಬೇತಿಯನ್ನು ವಸತಿ ಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳ ಮೂಲಕ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಿದೆ.
ಅರ್ಹತೆ:
ಅರ್ಜಿದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ವಯಸ್ಸು 20 ರಿಂದ 45 ವರ್ಷದೊಳಗಿರಬೇಕು. ಅಭ್ಯರ್ಥಿಗಳು ಲಘು ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ನಗರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ.2 ಲಕ್ಷ ಮೀರಿ ರಬಾರದು. ಗ್ರಾಮಾಂತರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ.1.50 ಲಕ್ಷ ಮೀರಿರಬಾರದು. ಯಾವುದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು.
ಈ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, 20 ರಿಂದ 45 ವಯೋಮಿತಿಯೊಳಗಿರಬೇಕು. ಈ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಿತ್ರದುರ್ಗ ಕಛೇರಿಯಿಂದ 10 ನೇ ತರಗತಿ ಉತ್ತೀರ್ಣರಾದ ಪ್ರಮಾಣ ಪತ್ರ ಹಾಗೂ ಖಾಯಂ ಲಘು ವಾಹನ ಚಾಲನಾ ಪರವಾನಗಿ (ಡಿ.ಎಲ್) ನಕಲು ಪ್ರತಿ ಸಲ್ಲಿಸಿ, ಅರ್ಜಿ ಪಡೆಯಬಹುದಾಗಿದೆ. ಈಗಾಗಲೇ ಜ.23 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಇದೇ ಜ.31ರ ಸಂಜೆ 4.30ರ ಒಳಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾಮನಭಾವಿ ಬಡವಾಣೆ, ಚಿತ್ರದುರ್ಗ ಇವರಿಗೆ ದ್ವಿ-ಪ್ರತಿಯಲ್ಲಿ ಭರ್ತಿ ಮಾಡಿ, ನಿಯಮಗಳಿಗೆ ಅನುಗುಣವಾಗಿ ದಾಖಲೆಗಳನ್ನು ಕ್ರೂಢೀಕರಿಸಿ ಕ್ರಮವಾಗಿ ಲಗತ್ತಿಸಿ ಖುದ್ದಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-234466 ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Mobile Canteen Subsidy Amount-ಸಹಾಯಧನ ವಿವರ:
ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟಿನ್ ಅನ್ನು ಆರಂಭಿಸಲು ಒಟ್ಟು ಘಟಕ ವೆಚ್ಚಕ್ಕೆ ಶೇ 70 ರಷ್ಟು ಗರಿಷ್ಠ 5 ಲಕ್ಷದ ವರೆಗೆ ಸಹಾಯಧನವನ್ನು ಒದಗಿಸಲಾಗುತ್ತದೆ.
ಯೋಜನೆಯ ಘಟಕ ವೆಚ್ಚ:
ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಇಲಾಖೆಯ ಸಹಾಯಧನ ಘಟಕ ವೆಚ್ಚದಲ್ಲಿ ಶೇ.70 ರಷ್ಟು ಗರಿಷ್ಠ ರೂ.5 ಲಕ್ಷ ಮಾತ್ರ. ಫಲಾನುಭವಿಯ ವಂತಿಗೆ ವಾಹನದ ಒಟ್ಟು ವೆಚ್ಚದ ಶೇ.5 ರಷ್ಟು. ಹಣಕಾಸು ಸಂಸ್ಥೆಗಳು, ಬ್ಯಾಂಕ್ ಸಾಲ – ವಾಹನದ ಒಟ್ಟು ವೆಚ್ಚದಲ್ಲಿ ಉಳಿದ ಮೊತ್ತ.
ಅರ್ಹತೆಯ ಆಧಾರದ ಮೇಲೆ ಆಯ್ಕೆಯ ಪ್ರಕ್ರಿಯೆ:-
ಈ ಯೋಜನೆಯಡಿ ಪರಿಶಿಷ್ಟ ಜಾತಿಯ ನಾಲ್ಕು ಮತ್ತು ಪರಿಶಿಷ್ಟ ಪಂಗಡದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕಾಲ ಉಚಿತ ಕೌಶಲ್ಯಾಭಿವೃದ್ದಿ ತರಬೇತಿ ನೀಡಲಾಗುತ್ತದೆ. ತರಬೇತಿಯು ಪಾಕಶಾಲಾ ಕೌಶಲ್ಯ, ಮೊಬೈಲ್ ಕ್ಯಾಂಟೀನ್ ನಿರ್ವಹಣೆ ಮತ್ತು ಗ್ರಾಹಕ ಸೇವೆಗಳನ್ನು ಒಳಗೊಂಡಂತೆ ಸಮಗ್ರ ತರಬೇತಿಯನ್ನು ಒದಗಿಸುತ್ತದೆ.
ಯೋಜನೆಯ ವಿವರ:-
ಪ್ರವಾಸೋದ್ಯಮ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ/ಕೌಶಲ್ಯ ತರಬೇತಿ ಹಾಗೂ ತರಬೇತಿ ಪಡೆದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ಉದ್ದಿಮೆಯನ್ನು ಆರಂಭಿಸಲು ಸಬ್ಸಿಡಿಯನ್ನು ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ.
ಬೇಕಾದ ದಾಖಲೆಗಳು:-
ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇತ್ತೀಚಿನ ನಿಮ್ಮ ಭಾವಚಿತ್ರದೊಂದಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಆಧಾರ್ಕಾರ್ಡ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು. ಖಾಯಂ ಲಘುವಾಹನ ಚಾಲನಾ ಪರವಾನಗಿ ಪತ್ರದ ಪ್ರತಿ ಸಲ್ಲಿಸಬೇಕು.
ವಿದ್ಯಾರ್ಹತೆಯ ಬಗ್ಗೆ ಕನಿಷ್ಠ ಎಸ್‌ಎಸ್‌ಎಲ್ಸಿ ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಪ್ರತಿ ಸಲ್ಲಿಸಬೇಕು. ಅರ್ಜಿದಾರನು ಯಾವುದೇ ಸರ್ಕಾರಿ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರದ ಬಗ್ಗೆ ಸ್ವಯಂ ಪ್ರಮಾಣೀಕರಿಸಿ, ರೂ.50/-ರ ಬೆಲೆಯ ಛಾಪಾಕಾಗದ (ಅಫಿಡೇವಿಟ್)ದಲ್ಲಿ ನಮೂನೆ-3ರಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. ಮೇಲಿನ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
ಆರ್ಥಿಕ ಸ್ವಾವಲಂಬನೆಗೆ ಹೊಸ ದಾರಿ:
ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಗಳು, ಕೇವಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲ, ಇದನ್ನು ಕೌಶಲ್ಯಾಭಿವೃದ್ದಿ ತರಬೇತಿಯ ಮೂಲಕ ವ್ಯಕ್ತಿಯ ಉಜ್ವಲ ಭವಿಷ್ಯಕ್ಕೆ ಹಾದಿ ಮಾಡುತ್ತಿದೆ. ಮೊಬೈಲ್ ಕ್ಯಾಂಟೀನ್ ತಂತ್ರಜ್ಞಾನವು ಪ್ರಸ್ತುತ ಕಾಲದ ಉದ್ಯಮದಲ್ಲಿ ಪ್ರಮುಖ ಅವಕಾಶಗಳನ್ನು ಒದಗಿಸುತ್ತಿದ್ದು, ಇದು ಸಮಾಜದ ಹಿಂದುಳಿದ ವರ್ಗಗಳಿಗೆ ಹೊಸ ಶಕ್ತಿ ತುಂಬುತ್ತದೆ.