
ಶಿವಮೊಗ್ಗ: ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಹೋದ ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ಪುತ್ರ ಬಸವೇಶ್ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಬಸವೇಶ್ ಅವರು ಮಹಿಳಾ ಅಧಿಕಾರಿಯನ್ನು ಅವಮಾನಿಸಿ, ನಿಂದಿಸಿದ ಹಾಗೂ ದರ್ಪ ಮೆರೆದ ಆಡಿಯೋ-ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಸವೇಶ್ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗುತ್ತಿದೆ.
ಆರ್. ಅಶೋಕ್ ಕಿಡಿ
ವಿಪಕ್ಷ ನಾಯಕ ಆರ್. ಅಶೋಕ್ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ‘‘ಇದು ಕಾಂಗ್ರೆಸ್ ಪಕ್ಷದ ನಿಜವಾದ ಸಂಸ್ಕೃತಿಯ ಪ್ರತೀಕ. ಅವರ ಮಹಿಳಾ ವಿರೋಧಿ ಧೋರಣೆ ಮತ್ತೆ ಬಯಲಾಗಿದ್ದು, ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದ ಕಿರುಕುಳಕ್ಕೆ ಈ ರಾಜ್ಯದಲ್ಲಿ ಇನ್ನೂ ಎಷ್ಟು ಜನ ಬಲಿಯಾಗಬೇಕು? ಶಾಸಕರ ಪುತ್ರನಿಗೆ ಅಧಿಕಾರಿಯೊಂದಿಗೆ ಹೀಗೆ ವರ್ತಿಸಲು ಯಾರು ಅಧಿಕಾರ ಕೊಟ್ಟರು? ಭದ್ರಾವತಿ ಶಾಸಕ ಸಂಗಮೇಶ್ ಅವರು ಜನಪ್ರತಿನಿಧಿಯೋ ಅಥವಾ ಪಾಳೆಗಾರನೋ? ಇದು ಪ್ರಜಾಪ್ರಭುತ್ವವೋ ಅಥವಾ ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಮತ್ತೊಂದು ಉದಾಹರಣೆಯೋ?’’ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯಿಂದ ಬಸವೇಶ್ ಬಂಧನದ ಆಗ್ರಹ
ಭದ್ರಾವತಿಯಲ್ಲಿ ಪ್ರಭಾವ ಮೆರೆದ ಶಾಸಕರ ಪುತ್ರ ಬಸವೇಶ್ ವಿರುದ್ಧ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ‘‘ಇಂತಹ ದೌರ್ಜನ್ಯ ಶ್ರೇಣಿಯ ವರ್ತನೆ ಸಹಿಸಿಕೊಳ್ಳಲಾಗದು. ಬಸವೇಶ್ ಅವರನ್ನು ತಕ್ಷಣ ಬಂಧಿಸಿ, ಗಡಿಪಾರು ಮಾಡಬೇಕು’’ ಎಂದು ಆಗ್ರಹಿಸಿದೆ.